Recent Posts

ಒಂದು ಮರದ ಬೆಲೆ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಒಂದು ಮರದ ಬೆಲೆ

ಕೃತಿಕಾರರ ಪರಿಚಯ :
 - ಹಾ. ಮಾ. ನಾಯಕ 
?  ಹಾ.ಮಾ. ನಾಯಕ ಅವರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪನಾಯಕ. ಇವರು ಹಾ.ಮಾ.ನಾ. ಎಂದೇ ಪ್ರಸಿದ್ಧರಾಗಿದ್ದಾರೆ. ಇವರು 1931ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ ಎಂಬಲ್ಲಿ ಜನಿಸಿದರು.  
?  ಇವರು ಸಾಹಿತ್ಯ ಸಲ್ಲಾಪ, ಸಂಚಯ, ಸಂವಾದ,  ಸಂಪದ, ಸಾಂಪ್ರತ, ಸ್ಮರಣ, ಸಮೂಹ,  ಸೃಜನ, ಸೂಲಂಗಿ,  ಬಾಳ್ನೋಟಗಳು ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.  
?  ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮುಂತಾದ ಪ್ರಶಸ್ತಿಗಳು ಲಭಿಸಿವೆ.
?  ಪ್ರಸ್ತುತ ಒಂದು ಮರದ ಬೆಲೆ ಲೇಖನವನ್ನು ಅವರ ಸಂಪದ ಕೃತಿಯಿಂದ ಆಯ್ದುಕೊಳ್ಳಲಾಗಿದೆ.                                                                             

 ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅಂತರ್ಜಲ - ಭೂಮಿಯ ಆಳದಲ್ಲಿರುವ ನೀರು.               
ಕೃತ್ಯ - ಕೆಲಸ ಗೊಡವೆ - ಉಸಾಬರಿ; ಗೋಜು.                         
ಜಾಮೀನು - ಹೊಣೆ; ಒತ್ತೆ.
ಡಾಲರ್ - ಅಮೆರಿಕಾದ ರೂಪಾಯಿ                       
ತೊಗಟೆ - ಸಿಪ್ಪೆ
ತೆತ್ತು (ಕ್ರಿ) - ನೀಡಿ; ಕೊಟ್ಟು.                            
ದಿಮ್ಮಿ - ಕತ್ತರಿಸಿದ ಮರ; ಕೊರಡು.
ದೂರು - ಅಹವಾಲು; ಮೊರೆ.                           
ದೃಷ್ಟಿಕೋನ - ನೋಡುವ ರೀತಿ
ದೇಣಿಗೆ - ಚಂದಾ; ವಂತಿಕೆ; ದಾನ.                       
ಪ್ರವಾಹ - ನೀರು ತುಂಬಿ ಹರಿಯುವುದು.
ಲಭಿಸು (ಕ್ರಿ) - ದೊರಕು; ಪ್ರಾಪ್ತವಾಗು.                     
ವೃಕ್ಷ - ಮರ; ತರು.
ಸಸ್ಯನಾಶಕ - ಗಿಡಗಳನ್ನು ಕೊಲ್ಲುವ ರಾಸಾಯನಿಕ.                
ಸಜೆ - ಶಿಕ್ಷೆ; ಸೆರೆಮನೆವಾಸ; ದಂಡನೆ.         

ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಪಾಲ್ಕೆಲನ್ ಮಾಡಿದ ಅಪರಾಧವೇನು?
ಪಾಲ್ಕೆಲನ್ ಐನೂರು ವರ್ಷ ಹಳೆಯದಾದ ಮರವೊಂದನ್ನು ಸಸ್ಯನಾಶಕ ಬಳಸಿ ಕೊಂದದ್ದು ಅಪರಾಧವಾಗಿದೆ.

2. ಪಾಲ್ಕೆಲನ್ಗೆ ಅಮೇರಿಕೆಯ ನ್ಯಾಯಾಲಯ ಯಾವ ಶಿಕ್ಷೆ ನೀಡಿತು?
ಪಾಲ್ ಕೆಲೆನ್ಗೆ ಅಮೇರಿಕೆಯ  ಜಿಲ್ಲಾ ನ್ಯಾಯಾಲಯ ಒಂಬತ್ತು ವರ್ಷ ಸಜೆ ಹಾಗೂ ಒಂದು ಸಾವಿರ ಡಾಲರ್ ದಂಡ ವಿಧಿಸಿದೆ!.

3. ಮರವನ್ನು ಉಳಿಸಲು ಹೌಸ್ಟನ್ ನಗರಪಾಲಿಕೆಗೆ ಎಷ್ಟು ದೇಣಿಗೆ ಬಂತು?
ಮರವನ್ನು ಉಳಿಸಲು ಅಗತ್ಯವಾದ ಕ್ರಮ ಕೈಗೊಳ್ಳುವ ಸಲುವಾಗಿ ಹೌಸ್ಟನ್ ನಗರಪಾಲಿಕೆಗೆ ಒಂದು ಲಕ್ಷಕ್ಕೂ ಹೆಚ್ಚು ಡಾಲರ್ಗಳ ದೇಣಿಗೆ ಬಂದಿದೆ.

4. ಭಾರತ ಹಾಗೂ ಅಮೇರಿಕದ ಭಾರತ ಸಂಸ್ಕೃತಿಗಳಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
ಭಾರತದ ಸಂಸ್ಕೃತಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಅಮೇರಿಕದ ಸಂಸ್ಕೃತಿಗೆ ಇನ್ನೂರು ವರ್ಷಗಳ ಇತಿಹಾಸವಿದೆ.

5.ಅಮೇರಿಕದ ಜನ ಮರಗಳನ್ನು ಉಳಿಸಲು ಏಕೆ ಮುಂದಾಗುತ್ತಾರೆ?
ಅಮೇರಿಕಾದ ಜನರಿಗೆ ಭವಿಷ್ಯದ ಬಗ್ಗೆ ಚಿಂತೆಯಿದೆ. ಮರದ ಬೆಲೆ ಅವರಿಗೆ ತಿಳಿದಿದೆ. ಈ ಕಾರಣದಿಂದ ಮರಗಳನ್ನು ಉಳಿಸಲು ಮುಂದಾಗುತ್ತಾರೆ.

6. ಹಾ. ಮಾ. ನಾಯಕರು ಹೇಳುವಂತೆ ಎಲ್ಲವನ್ನೂ ಮೀರಿದ ಮರದ ಬೆಲೆ ಯಾವುದು?
ಹಾ. ಮಾ. ನಾಯಕರು ಹೇಳುವಂತೆ ಮನುಕುಲವನ್ನು ಕಾಪಾಡಲು ಮರಗಳಿಲ್ಲದೆ ಸಾಧ್ಯವಿಲ್ಲ ಎಂಬ ಸತ್ಯವೇ ಆ ಬೆಲೆ!

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಮರವನ್ನು ಉಳಿಸಲು ಅಮೇರಿಕಾದ ವೃಕ್ಷಪ್ರೇಮಿಗಳು ಯಾವ ರೀತಿ ಸ್ಪಂದಿಸಿದರು?
ಮರವನ್ನು ಉಳಿಸಲು, ಆ ಮರಕ್ಕೆ ಬೇಗನೆ ಪೂರ್ಣ ಆರೋಗ್ಯ ಲಭಿಸಲೆಂದು ಹಾರೈಸಿ ಸಾವಿರಾರು ಜನ ವೃಕ್ಷಪ್ರೇಮಿಗಳು ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ ; ಮರಕ್ಕೆ ದೀರ್ಘಾಯಸ್ಸು ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

2. ಬೆಂಗಳೂರಿನಲ್ಲಿ ಗಣ್ಯವ್ಯಕ್ತಿಯೊಬ್ಬರು ತಮ್ಮ ಮನೆಯ ಬಳಿಯಲ್ಲಿನ ಮರ ತೆಗೆಸಲು ಹೇಗೆ ಪ್ರಯತ್ನಿಸಿದರು?
ಬೆಂಗಳೂರು ಮಹಾನಗರದಲ್ಲಿ ಒಂದು ಹಳೆಯ ಆಲದ ಮರ. ಅದರ ಪಕ್ಕದಲ್ಲಿಯೇ ಗಣ್ಯ ವ್ಯಕ್ತಿಯೊಬ್ಬರ ಮನೆ. ಈ ಮರದಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಆ ಪ್ರಭಾವಿ ಗಣ್ಯರ ದೂರು. ಸಂಬಂಧಪಟ್ಟ ಆಡಳಿತ ವರ್ಗದವರು ಈಗ ಆ ಮರವನ್ನು ಕಡಿದುಹಾಕಲು ಯೋಚಿಸುತ್ತಿದ್ದಾರೆ ಇಷ್ಟರಲ್ಲಿಯೇ ಆ ಮರವನ್ನು ಕಡಿದು ಉರುಳಿಸಿದ್ದರೆ ಆಶ್ಚರ್ಯವೇನೂ ಇಲ್ಲ!

3. ಭಾರತದಲ್ಲಿ ಮರಗಳ ನಾಶ ಹೇಗೆ ನಿರಾತಂಕವಾಗಿ ನಡೆಯುತ್ತಿದೆ?
ನಮ್ಮಲ್ಲಿ ಮರ ಕತ್ತರಿಸುವುದು ತೀರ ಸಾಮಾನ್ಯವಾದ ವಿಚಾರ. ಕಾನೂನಿಗೆ ವಿರುದ್ಧವಾಗಿದ್ದರೂ, ಮರ ಕತ್ತರಿಸಲು ನಮ್ಮ ಜನ ಮುಂದಾಗುತ್ತಾರೆ. ರಾಜ್ಯದ, ರಾಷ್ಟ್ರದ ಹೆದ್ದಾರಿಗಳಲ್ಲಿಯೇ, ಹಾಡುಹಗಲಿನಲ್ಲಿ ಈ ಕೊಲೆಗಳು ನಡೆಯುವುದನ್ನು ನಾವೆಲ್ಲರೂ ನಿತ್ಯ ನೋಡುತ್ತಿದ್ದೇವೆ. ಕೆಲವು ಕೊಲೆಗಳು ನೇರವಾಗಿಯೇ ಬಹಿರಂಗವಾಗಿಯೇ ನಡೆಯುತ್ತವೆ. ಮತ್ತೆ ಕೆಲವು ಕೊಲೆಗಳು ಮೋಸದಿಂದ, ಉಪಾಯದಿಂದ ನಡೆಯುತ್ತವೆ.   

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಆರೋಗ್ಯವಂತ ಮರವೊಂದರ ಬೆಲೆ ಏನೆಂಬುದನ್ನು ವಿಜ್ಞಾನಿಯೊಬ್ಬರು ಹೇಗೆ ಲೆಕ್ಕ ಹಾಕಿದ್ದಾರೆ?
ಐವತ್ತು ವರ್ಷ ತುಂಬಿದ ಆರೋಗ್ಯವಂತ ಮರವೊಂದರ ಬೆಲೆ ಏನು ಎಂಬುದನ್ನು ವಿಜ್ಞಾನಿಯೊಬ್ಬರು ಲೆಕ್ಕ ಹಾಕಿ ಹೇಳಿದ್ದಾರೆ. ಅವರ ಪ್ರಕಾರ ಅಂಥ ಮರವೊಂದರ ಬೆಲೆ ಹದಿನಾರು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಎಂದರೆ ಯಾರು ನಂಬುತ್ತಾರೆ? ಈ ವಿವರ ನೋಡಿ - ಒಂದು ಮರ ಉತ್ಪಾದಿಸುವ ಆಮ್ಲಜನಕದ ಬೆಲೆ ಎರಡೂವರೆ ಲಕ್ಷ; ಅದು ಹೀರಿಕೊಳ್ಳುವ ಇಂಗಾಲ ಜನಕದ ಬೆಲೆ ಐದು ಲಕ್ಷ; ಮಣ್ಣಿನ ಸವೆತ ತಡೆಯುವುದರ ಬೆಲೆ ಎರಡೂವರೆ ಲಕ್ಷ; ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಿ ಪ್ರವಾಹವನ್ನು ತಡೆಗಟ್ಟುವುದರ ಬೆಲೆ ಮೂರು ಲಕ್ಷ; ಆಹಾರ ಹಾಗೂ ಗೊಬ್ಬರದಬೆಲೆ ಅರ್ಧ ಲಕ್ಷ; ಪಶುಪಕ್ಷಿಗಳಿಗೆ, ಕ್ರಿಮಿಕೀಟಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡುವುದರ ಬೆಲೆ ಎರಡೂವರೆ ಲಕ್ಷ. ಇದರ ಮೇಲೆ ಬೇಕಾದರೆ ನೀವು ದಿಮ್ಮಿಗಳ ಬೆಲೆ ಏನಾಗುತ್ತದೆಂಬುದನ್ನು ಲೆಕ್ಕ ಹಾಕಿಕೊಳ್ಳಬಹುದು.

2. ಮರಗಳ ಸಂರಕ್ಷಣೆಯಲ್ಲಿ ಭಾರತ ಹಾಗೂ ಅಮೆರಿಕಾದ ಜನರ ನಡುವೆ ಇರುವ ವ್ಯತ್ಯಾಸಗಳೇನು?
ಐನೂರು ವರ್ಷ ಹಳೆಯದಾದ ಮರವೊಂದನ್ನು ಸಸ್ಯನಾಶಕ ಬಳಸಿ ಕೊಂದ ಅಪರಾಧಕ್ಕಾಗಿ, ಅಮೆರಿಕೆಯ ಪ್ರಜೆಯಾದ ಪಾಲ್ ಕೆಲೆನ್ ಎಂಬುವವನಿಗೆ ಜಿಲ್ಲಾ ನ್ಯಾಯಾಲಯ ಒಂಬತ್ತು ವರ್ಷ ಸಜೆ ಹಾಗೂ ಒಂದು ಸಾವಿರ ಡಾಲರ್ ದಂಡ ವಿಧಿಸಿದೆ!  ಮರವನ್ನು ಉಳಿಸಲು ಅಗತ್ಯವಾದ ಕ್ರಮ ಕೈಗೊಳ್ಳುವ ಸಲುವಾಗಿ ಹೌಸ್ಟನ್ ನಗರಪಾಲಿಕೆಗೆ ಒಂದು ಲಕ್ಷಕ್ಕೂ ಹೆಚ್ಚು ಡಾಲರ್ಗಳ ದೇಣಿಗೆ ಬಂದಿದೆ. ಆದರೇನು? ಮರ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ. ಆ ಮರಕ್ಕೆ ಬೇಗನೆ ಪೂರ್ಣ ಆರೋಗ್ಯ ಲಭಿಸಲೆಂದು ಹಾರೈಸಿ ಸಾವಿರಾರು ಜನ ವೃಕ್ಷಪ್ರೇಮಿಗಳು ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ ; ಮರಕ್ಕೆ ದೀರ್ಘಾಯಸ್ಸು ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಾಯುತ್ತಿರುವ ಮರವನ್ನು ಉಳಿಸುವ ಸಲುವಾಗಿ ಜನರು ಪ್ರಾರ್ಥನೆ ಮಾಡುತ್ತಾರೆ, ಮಾತ್ರವಲ್ಲ ತಮ್ಮ ಕೈಲಾದುದನ್ನೆಲ್ಲ ಮಾಡುತ್ತಾರೆ-ಇನ್ನೂರು ವರ್ಷಗಳ ಸಂಸ್ಕೃತಿಯ ಅಮೆರಿಕಾ ದೇಶದಲ್ಲಿ!  ಯಾರಿಗೋ ತೊಂದರೆಯಾಗುತ್ತಿದೆ ಎಂಬುದನ್ನು ಕೇಳಿ, ಆ ತೊಂದರೆ ಯಾವ ಬಗೆಯದು ಎಂಬುದನ್ನು ತಿಳಿಯುವ ಗೊಡವೆಗೇ ಹೋಗದೆ, ಅನೇಕ ಕಾಲ ಬದುಕಬಹುದಾದ ಮರವನ್ನು ಕತ್ತರಿಸಲು ಮುಂದಾಗುತ್ತಾರೆ, ಎರಡು ಸಾವಿರ ವರ್ಷಗಳಿಗೂ ಮಿಕ್ಕ ಸಂಸ್ಕೃತಿಯ ನಮ್ಮ ದೇಶದಲ್ಲಿ! ಎರಡೂ ತೀರ ಭಿನ್ನವಾದ ದೃಷ್ಟಿಕೋನಗಳು. ಆ ಅಮೇರಿಕೆಯ ಜನರಲ್ಲಿ ತಮ್ಮ ಭವಿಷ್ಯದಲ್ಲಿ ಆಸಕ್ತಿಯಿದೆ. ಈ ನಮಗಾದರೋ ಇಂದಷ್ಟೇ ಮುಖ್ಯವಾದದ್ದು. ನಾಳೆ ಅಲ್ಲ. ನಮ್ಮಲ್ಲಿ ಮರ ಕತ್ತರಿಸುವುದು ತೀರ ಸಾಮಾನ್ಯವಾದ ವಿಚಾರ. ಕಾನೂನಿಗೆ ವಿರುದ್ಧವಾಗಿದ್ದರೂ, ಮರ ಕತ್ತರಿಸಲು ನಮ್ಮ ಜನ ಮುಂದಾಗುತ್ತಾರೆ. ರಾಜ್ಯದ, ರಾಷ್ಟ್ರದ ಹೆದ್ದಾರಿಗಳಲ್ಲಿಯೇ, ಹಾಡುಹಗಲಿನಲ್ಲಿ ಈ ಕೊಲೆಗಳು ನಡೆಯುವುದನ್ನು ನಾವೆಲ್ಲರೂ ನಿತ್ಯ ನೋಡುತ್ತಿದ್ದೇವೆ. ಕೆಲವು ಕೊಲೆಗಳು ನೇರವಾಗಿಯೇ ಬಹಿರಂಗವಾಗಿಯೇ ನಡೆಯುತ್ತವೆ. ಮತ್ತೆ ಕೆಲವು ಕೊಲೆಗಳು ಮೋಸದಿಂದ, ಉಪಾಯದಿಂದ ನಡೆಯುತ್ತವೆ.   

ಈ) ಸಂದರ್ಭದೊಡನೆ ವಿವರಿಸಿರಿ.

1. ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ.
ಈ ವಾಕ್ಯವನ್ನು ಹಾ. ಮಾ. ನಾಯಕ ಅವರು ಬರೆದಿರುವ ಸಂಪದ ಎಂಬ ಕೃತಿಯಿಂದ ಆಯ್ದ ಒಂದು ಮರದ ಬೆಲೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕರು ಹೇಳಿದ್ದಾರೆ. ಅಮೇರಿಕೆಯ ಜನರು ಮರವನ್ನು ಉಳಿಸಲು, ಆ ಮರಕ್ಕೆ ಬೇಗನೆ ಪೂರ್ಣ ಆರೋಗ್ಯ ಲಭಿಸಲೆಂದು ಹಾರೈಸಿ ಸಾವಿರಾರು ಜನ ವೃಕ್ಷಪ್ರೇಮಿಗಳು ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ; ಮರಕ್ಕೆ ದೀರ್ಘಾಯಸ್ಸು ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ನಮ್ಮಲ್ಲಿ ಮರ ಕತ್ತರಿಸುವುದು ತೀರಾ ಸಾಮಾನ್ಯ ವಿಚಾರ.
ಈ ವಾಕ್ಯವನ್ನು ಹಾ. ಮಾ. ನಾಯಕ ಅವರು ಬರೆದಿರುವ ಸಂಪದ ಎಂಬ ಕೃತಿಯಿಂದ ಆಯ್ದ ಒಂದು ಮರದ ಬೆಲೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.   ಈ ಮಾತನ್ನು ಲೇಖಕರು ಹೇಳಿದ್ದಾರೆ. ಅಮೇರಿಕಾದಲ್ಲಿ ಐನೂರು ವರ್ಷದ ಹಳೆಯ  ಮರವನ್ನು ಉಳಿಸಲು ಅಗತ್ಯವಾದ ಕ್ರಮ ಕೈಗೊಳ್ಳುವ ಸಲುವಾಗಿ ಹೌಸ್ಟನ್ ನಗರಪಾಲಿಕೆಗೆ ಒಂದು ಲಕ್ಷಕ್ಕೂ ಹೆಚ್ಚು ಡಾಲರ್‌ಗಳ ದೇಣಿಗೆ ಬಂದಿದೆ. ಆ ಅಮೇರಿಕೆಯ ಜನರಲ್ಲಿ ತಮ್ಮ ಭವಿಷ್ಯದಲ್ಲಿ ಆಸಕ್ತಿಯಿದೆ. ಈ ನಮಗಾದರೋ ಇಂದಷ್ಟೇ ಮುಖ್ಯವಾದದ್ದು. ನಾಳೆ ಅಲ್ಲ, ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3. ಮನುಕುಲವನ್ನು ಕಾಪಾಡಲು ಮರಗಳಿಲ್ಲದೆ ಸಾಧ್ಯವಿಲ್ಲ.
ಈ ವಾಕ್ಯವನ್ನು ಹಾ. ಮಾ. ನಾಯಕ ಅವರು ಬರೆದಿರುವ ಸಂಪದ ಎಂಬ ಕೃತಿಯಿಂದ ಆಯ್ದ ಒಂದು ಮರದ ಬೆಲೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕರು ಹೇಳಿದ್ದಾರೆ. ವಿಜ್ಞಾನಿಯೊಬ್ಬರು ಐವತ್ತು ವರ್ಷ ತುಂಬಿದ ಆರೋಗ್ಯವಂತ ಮರವೊಂದರ ಬೆಲೆ ಹದಿನಾರು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಎಂದು ಹೇಳಿದ್ದಾರೆ. ಅದರಿಂದ ನಮಗೆ ಬಹಳ ಉಪಯೋಗವಿದೆ. ಅದರಲ್ಲೂ ಎಲ್ಲವನ್ನು ಮೀರಿದ ಒಂದು ಬೆಲೆಯಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.     

ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಮರ - ವೃಕ್ಷ; ತರು,    
ಭೂಮಿ -  ಧರೆ; ವಸುಧೆ,   
ದೇಣಿಗೆ -  ಚಂದಾ; ದಾನ,   
ಸಜೆ - ಶಿಕ್ಷೆ; ದಂಡನೆ.

ಆ) ಕೆಳಗಿನ ಪದಗಳಿಗೆ ತತ್ಸಮ ತದ್ಭವ ರೂಪ ಬರೆಯಿರಿ.
ವರ್ಷ -  ವರುಷ,     
ದೃಷ್ಟಿ - ದಿಟ್ಟಿ,      
ಆಶ್ಚರ್ಯ- ಅಚ್ಚರಿ.  

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ದೃಷ್ಟಿಕೋನ : ನಮ್ಮ ಗುರಿ ಉತ್ತಮ ದೃಷ್ಟಿಕೋನ ಹೊಂದಿರಬೇಕು.
2. ಸಂಸ್ಕೃತಿ   : ಭಾರತೀಯ ಸಂಸ್ಕೃತಿ ಅತೀ ಪ್ರಾಚೀನವಾದುದು.
3. ಪ್ರಾರ್ಥನೆ  : ನಾವು ಪ್ರತಿದಿನ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ.
4. ದೇಣಿಗೆ   : ನಾವು ದೇವಸ್ಥಾನಕ್ಕೆ ದೇಣಿಗೆ ಕೊಡುತ್ತೇವೆ.
5. ಸುದ್ದಿ     : ಪತ್ರಿಕೆಗಳಿಂದ ಸುದ್ಧಿಸಮಾಚಾರಗಳನ್ನು ತಿಳಿಯುತ್ತೇವೆ.  

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಬಹಿರಂಗ - ಅಂತರಂಗ,     
ನಿಧಾನ - ವೇಗ,      
ಆರೋಗ್ಯ - ಅನಾರೋಗ್ಯ,    
ಉಳಿಸು - ಅಳಿಸು,        
ಆಸಕ್ತಿ - ನಿರಾಸಕ್ತಿ  

ಉ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ದೀರ್ಘಾಯುಸ್ಸು = ದೀರ್ಘ + ಆಯುಸ್ಸು
1. ಪತ್ರಗಳನ್ನಿಡು  = ಪತ್ರಗಳನ್ನು  +  ಇಡು   
2. ಸಾವಿರಾರು   = ಸಾವಿ    +  ಆರು   
3. ಶುಭಾಶಯ   = ಶುಭ   +  ಆಶಯ  
4. ಮರವೊಂದು  = ಮರ   +  ಒಂದು  
5. ವಿಜ್ಞಾನಿಯೊಬ್ಬ = ವಿಜ್ಞಾನಿ  +  ಒಬ್ಬ    

ಋ) ಅ ಪಟ್ಟಿಯನ್ನು ಬ ಪಟ್ಟಿಯೊಂದಿಗೆ ಹೊಂದಿಸಿ ಬರೆದಿದೆ.
ಅ ಪಟ್ಟಿ                     ಬ ಪಟ್ಟಿ
1) ಅಲ್ಪವಿರಾಮ            ಇ) ,
2) ಪ್ರಶ್ನಾರ್ಥಕ               ಅ) ?
3) ಆಶ್ಚರ್ಯ                  ಉ) !
4) ಅರ್ಧವಿರಾಮ           ಆ) ;
5) ಉದ್ಧರಣ                   ಈ) .....          

4. ಸೈದ್ಧಾಂತಿಕ ವ್ಯಾಕರಣ :

1. ಲಿಂಗಗಳು : ಕನ್ನಡ ಭಾಷೆಯಲ್ಲಿ ಮೂರು ಲಿಂಗಗಳನ್ನು ಗುರುತಿಸುತ್ತೇವೆ. ಅವುಗಳೆಂದರೆ
1. ಪುಲ್ಲಿಂಗ
2. ಸ್ತ್ರೀಲಿಂಗ
3. ನಪುಂಸಕಲಿಂಗ

1. ಪುಲ್ಲಿಂಗ :
ಉದಾ : ಮುದುಕ, ಶಂಕರ, ಅವನು, ಚಿಕ್ಕಪ್ಪ, ತಂದೆ, ಅಣ್ಣ, ಮಾವ, ಸಚಿವ, ಕವಿ, ಒಳ್ಳೆಯವ, ಜಾಣ, ಶಕ್ತಿವಂತ, ಗಟ್ಟಿಗ.
2. ಸ್ತ್ರೀಲಿಂಗ : ಉದಾ : ದೊಡ್ಡವಳು, ಅಕ್ಕ, ಅರಸಿ, ರಾಣಿ, ಚೆಲುವೆ, ತಾಯಿ, ಒಳ್ಳೆಯವಳು, ಸ್ನೇಹಿತೆ, ಮಗಳು, ಸಹೋದರಿ, ತಂಗಿ, ಗೆಳತಿ, ಸಚಿವೆ, ಬಾಲಕಿ, ಶಿಕ್ಷಕಿ.
3. ನಪುಂಸಕಲಿಂಗ : ಉದಾ : ಮಗು, ಹೂವು, ಹಣ್ಣು, ಕಾಯಿ, ಮರ, ಹಾವು, ಇಲಿ, ಎತ್ತು, ಹುಲಿ, ಕಲ್ಲು, ಮಣ್ಣು, ನದಿ, ಬೆಟ್ಟ, ಪುಸ್ತಕ, ಆಕಾಶ, ಕತ್ತೆ, ಕುದುರೆ, ಜನ.   

                 




 
You Might Like

Post a Comment

0 Comments