Recent Posts

ಪರಿವರ್ತನೆ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಪರಿವರ್ತನೆ

ಕೃತಿಕಾರರ ಪರಿಚಯ :

 - ಜಿ. ಎಸ್. ಬಸವರಾಜಶಾಸ್ತ್ರಿ 
?  ಜಿ.ಎಸ್. ಬಸವರಾಜಶಾಸ್ತ್ರೀ ಅವರು 1936 ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬೇಡರ ಗಣೇಕಲ್ ಗ್ರಾಮದಲ್ಲಿ ಜನಿಸಿದರು.
?  ಇವರು ನಾಮಾವಳಿ, ಕರ್ಮಯೋಗಿ, ಕರುಣಾಮಯಿ, ಜಗದ್ಗುರು ರೇಣುಕ ಚರಿತೆ, ಸಮಾಜಜೀವಿ, ಗಟ್ಟಿಮಾತು, ದಾರಿದೀಪ, ವಚನಾಮೃತಧಾರೆ, ತ್ರಿವೇಣಿ ಸಂಗಮ, ಪ್ರತಿಸ್ಪಂದನ, ಮನುಕುಲತಿಲಕ ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಇವರಿಗೆ ಅವರ ಅಭಿಮಾನಿಗಳು ಶಾಸ್ತ್ರಿ ಸಂಪದ ಎನ್ನುವ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.  
?  ಪ್ರಸ್ತುತ ಗದ್ಯಭಾಗವನ್ನು ಜಿ.ಎಸ್. ಬಸವರಾಜಶಾಸ್ತ್ರೀ ಅವರ ಶಾಸ್ತ್ರಿ ಕನಸು ಕೃತಿಯಿಂದ ಆಯ್ದುಕೊಳ್ಳಲಾಗಿದೆ.
ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅರಿವು - ತಿಳಿವಳಿಕೆ; ಪ್ರಜ್ಞೆ.                        
ಅರೆಷ್ಟು (ಅನ್ಯ ದೇಶೀಯ) - ಬಂಧಿಸು; ಸೆರೆಹಿಡಿ.
ಈಚಲ - ತಾಳೆಯ ಜಾತಿಗೆ ಸೇರಿದ ಮರ.             
ಗಂಟುಬೀಳು (ಕ್ರಿ) - ಬೆನ್ನುಹತ್ತು
ತಕರಾರು - ಆಕ್ಷೇಪಣೆ                           
ತಲೆದೂಗು (ನುಡಿಗಟ್ಟು) - ಮೆಚ್ಚುಗೆ ಸೂಚಿಸು
ಪರಿವರ್ತನೆ - ಬದಲಾವಣೆ                        
ಪರೋಪಕಾರಿ - ಇತರರಿಗೆ ನೆರವು ನೀಡುವವನು.
ಪಶ್ಚಾತ್ತಾಪ - ತಪ್ಪು ಮಾಡಿದ ಕೆಲಸಕ್ಕೆ ಮರುಗುವಿಕೆ.       
ಸಂಭಾವನೆ - ಗೌರವಧನ
ಮೈಮರೆ (ನುಡಿಗಟ್ಟು) - ತಲ್ಲೀನತೆ                   
ವ್ಯಸನ - ಚಿಂತೆ; ದುಃಖ.
ಸನ್ಮಾರ್ಗ - ಒಳ್ಳೆಯ ದಾರಿ; ಸರಿಯಾದ ಮಾರ್ಗ
ಬಯಲಾಟ - ಬಯಲಲ್ಲಿ ನಡೆಯುವ ಜಾನಪದ ನಾಟಕ ಪ್ರಕಾರಗಳಲ್ಲಿ ಒಂದು ಬಗೆ.

ಪ್ರಶ್ನೆಗಳು :

ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.

1. ಜಿ.ಎಸ್. ಬಸವರಾಜಶಾಸ್ತ್ರೀ ಅವರ ತಾತನ ಹೆಸರು  ಗಣೇಕಲ್ ಶಿವಯ್ಯ
2. ತಾರಾನಾಥರ ಊರು  ರಾಯಚೂರು
3. ತಾರಾನಾಥರ ವಾಚನ್ನು ಕದ್ದವನು  ಒಬ್ಬ ಬಾಲಕ
4. ಪರಿವರ್ತನೆ ಪಾಠದ ಆಕರ ಕೃತಿ  ಶಾಸ್ತ್ರಿ ಕನಸು

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ದುಷ್ಟನ ಮನಸ್ಸು ಯಾವ ಮಾತುಗಳಿಂದ ಪರಿವರ್ತನೆಯಾಗುತ್ತದೆ?
ದುಷ್ಟನ ಮನಸ್ಸು ಮನಸ್ಸಿಗೆ ಹಿತಕರವಾದ, ಆನಂದದಾಯಕವಾದ ಮಾತುಗಳಿಂದ ಪರಿವರ್ತನೆಯಾಗುತ್ತದೆ.

2. ಗಣೇಕಲ್ ಶಿವಯ್ಯನವರು ಯಾವುದಕ್ಕೆ ಪ್ರಸಿದ್ಧರಾಗಿದ್ದರು?
ಗಣೇಕಲ್ ಶಿವಯ್ಯನವರು ಪಿಟೀಲು ವಾದಕ ಮತ್ತು ಬಯಲಾಟದ ನಿರ್ದೇಶಕನಾಗಿ ಪ್ರಸಿದ್ಧರಾಗಿದ್ದರು.

3. ಗಣೇಕಲ್ ಶಿವಯ್ಯನವರ ಸಂಗೀತ ಕೇಳಲು ಕಳ್ಳರು ಏಕೆ ಒಪ್ಪಿಕೊಂಡರು?
ಗಣೇಕಲ್ ಶಿವಯ್ಯನವರು ಅವರ ಹಾಡನ್ನು ಕೇಳಿದರೆ ತಮ್ಮಲ್ಲಿದ್ದ ಹಣವನ್ನು ಕಳ್ಳರಿಗೆ ಕೊಡುತ್ತೇನೆ ಎಂದು ಹೇಳಿದರು. ಅದಕ್ಕೆ ಕಳ್ಳರು ಹಾಡನ್ನು ಕೇಳಲು ಒಪ್ಪಿಕೊಂಡರು.

4. ಗಣೇಕಲ್ ಶಿವಯ್ಯನವರು ಸಂಗೀತ ನಡೆಸಿಕೊಟ್ಟ ಸ್ಥಳದ ವಾತಾವರಣ ಹೇಗಿತ್ತು?
ಗಣೇಕಲ್ ಶಿವಯ್ಯನವರು ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. ಮುಂದೆ ಹಳ್ಳದ ನೀರು ಜುಳುಜುಳು ಎಂದು ನಿಧಾನಕ್ಕೆ ಹರಿಯುತ್ತಿತ್ತು. ಇಂತಹ ನಿರ್ಮಲ  ವಾತಾವರಣವಿತ್ತು.

5.ಕಳ್ಳರು ಗಣೇಕಲ್ ಶಿವಯ್ಯನವರ ಸಂಗೀತವನ್ನು ಹೇಗೆ ಆಲಿಸಿದರು?
ಬೈಜು ಹಾಡಿದಾಗ ಹಾರವನ್ನು ಹಾಕಿಸಿಕೊಂಡು ಹೋದ ಜಿಂಕೆಯು ಮರಳಿ ಬಂದು ಅವನ ಹಾಡು ಕೇಳುತ್ತಾ ಮೈ ಮರೆತು ನಿಂತಂತೆ ಆ ಕಳ್ಳರೂ ತಾತನ ಹಾಡಿಗೆ ಮೈಮರೆತು, ಕಣ್ಣು ಮುಚ್ಚಿಕೊಂಡು ತಲೆದೂಗುತ್ತಾ ಕುಳಿತುಕೊಂಡರು.  

6. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಆಶೀರ್ವದಿಸಿದರು?
ಗಣೇಕಲ್ ಶಿವಯ್ಯನವರು ಇನ್ನು ಮುಂದೆ ಈ ಕೆಟ್ಟ ಕಳ್ಳತನವನ್ನು ಮಾಡಬೇಡಿ, ಸತ್ಯವಂತರಾಗಿ ಬದುಕಿ ಎಂದು ಹೇಳಿ ಅವರು ಕೊಟ್ಟ ಹಣದೊಂದಿಗೆ ತಮ್ಮ ಹಣವನ್ನು ಕೊಟ್ಟು ನಾಲ್ವರೂ ಒಟ್ಟುಗೂಡಿ ವ್ಯಾಪಾರ ಮಾಡಿ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ.

7. ತಾರಾನಾಥರು ಆಶ್ರಮವನ್ನು ಏಕೆ ಕಟ್ಟಿದರು?
ಬಡವರು ಉದ್ಧಾರವಾಗಬೇಕಾದರೆ ಮೊದಲು ಅವರ ಮಕ್ಕಳು ವಿದ್ಯಾವಂತರಾಗಬೇಕು. ಆ ಮೂಲಕ ನೌಕರಿಗೆ ಸೇರಿ ಸುಖಜೀವನ ನಡೆಸುವಂತಾಗಬೇಕು. ಅದಕ್ಕಾಗಿ ತಾರಾನಾಥರು ಆಶ್ರಮ ಕಟ್ಟಿದರು.

8. ತಾರಾನಾಥರಿಗೆ ವಾಚನ್ನು ಯಾರು ನೀಡಿದ್ದರು?
ತಾರಾನಾಥರಿಗೆ ವಾಚನ್ನು ವಿದೇಶೀಯರು  ನೀಡಿದ್ದರು.  

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಕೇಳಿಕೊಂಡರು?
ಗಣೇಕಲ್ ಶಿವಯ್ಯನವರು ಕಳ್ಳರನ್ನು ಕುರಿತು ಅಯ್ಯಾ ನಿಮಗೆ ಹಣಬೇಕು, ಅದು ನನ್ನಲ್ಲಿದೆ. ಅದನ್ನು ನಿಮಗೆ ಕೊಡುತ್ತೇನೆ, ಯಾವ ತಕರಾರೂ ಇಲ್ಲ. ಆದರೆ ನೀವು ನನ್ನ ಆಸೆಯನ್ನು ಪೂರೈಸಬೇಕು ಅದೇನೂ ಕಷ್ಟದಾಯಕವಲ್ಲ, ಕಿವಿಗಳಿಗೆ ಸುಖಕರವಾದುದು. ನೀವು ನಿಶ್ಚಿಂತೆಯಿಂದ ಕುಳಿತು ಅರ್ಧತಾಸು ನನ್ನ ಸಂಗೀತವನ್ನು ಕೇಳಬೇಕು. ಎಂದು ಕೇಳಿಕೊಂಡರು.

2. ಗಣೇಕಲ್ ಶಿವಯ್ಯನವರು ಕಳ್ಳರ ಸಮ್ಮುಖದಲ್ಲಿ ನಡೆಸಿದ ಸಂಗೀತ ಯಾವ ರೀತಿ ಇತ್ತು?
ಗಣೇಕಲ್ ಶಿವಯ್ಯನವರು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. ಮುಂದೆ ಹಳ್ಳದ ನೀರು ಜುಳುಜುಳು ಎಂದು ನಿಧಾನಕ್ಕೆ ಹರಿಯುತ್ತಲೇ ಇದೆ. ತಾತನು ಪಿಟೀಲು ಬಾರಿಸುತ್ತಾ ಮಧುರವಾದ ಕಂಠದಿಂದ ಹಾಡತೊಡಗಿದನು. ಬೈಜು ಹಾಡಿದಾಗ ಹಾರವನ್ನು ಹಾಕಿಸಿಕೊಂಡು ಹೋದ ಜಿಂಕೆಯು ಮರಳಿಬಂದು ಅವನ ಹಾಡು ಕೇಳುತ್ತಾ ಮೈ ಮರೆತು ನಿಂತಂತೆ ಆ ಕಳ್ಳರೂ ತಾತನ ಹಾಡಿಗೆ ಮೈಮರೆತು, ಕಣ್ಣು ಮುಚ್ಚಿಕೊಂಡು ತಲೆದೂಗುತ್ತಾ ಕುಳಿತುಕೊಂಡರು.  

3. ಗಣೇಕಲ್ ಶಿವಯ್ಯನವರ ಸಂಗೀತ ಕೇಳಿದ ನಂತರ ಕಳ್ಳರು ಏನು ಮಾಡಿದರು?
ಕಳ್ಳರು ತಮ್ಮಲ್ಲಿರುವ ಹಣವನ್ನು ತೆಗೆದು ತಾತನ ಮುಂದೆ ಇಟ್ಟು ತಾತನ ಪಾದಕ್ಕೆ ಎರಗಿ ತಾತ ನಿಮ್ಮ ಹಣವು ನಮಗೆ ಬೇಡ, ನಿಮ್ಮ ಆಶೀರ್ವಾದವಷ್ಟೇ ಸಾಕು ಎಂದು ಹೊರಡತೊಡಗಿದರು.

4. ತಾರಾನಾಥರ ವ್ಯಕ್ತಿತ್ವದ ವಿಶೇಷತೆಗಳೇನು?

ತಾರಾನಾಥರು ಬಡವರ ಬಂಧು, ಮಹಾಜ್ಞಾನಿಗಳೂ ದಯಾಳುಗಳೂ ಧೈರ್ಯವಂತರೂ ಪರೋಪಕಾರಿಗಳೂ ಪರರ ಹಿತೈಷಿಗಳೂ ಆತ್ಮವಿಶ್ವಾಸಿಗಳೂ ಆಗಿದ್ದರು. ಅವರಿಗೆ ಅಸಾಧ್ಯವಾದ ಕೆಲಸವೇ ಇಲ್ಲ. ಅದು ಎಂತಹದೇ ಇರಲಿ, ಸಾಧಿಸುವ ಶಕ್ತಿ ಅವರಲ್ಲಿ ಇತ್ತು. ಒಟ್ಟಿನಲ್ಲಿ ಅವರು ಎಲ್ಲರಿಗೂ ಬೇಕಾಗಿದ್ದರು.

5.ಬಾಲಕನು ಶಿಕ್ಷೆ ಅನುಭವಿಸುವುದನ್ನು ತಾರಾನಾಥರು ಹೇಗೆ ತಪ್ಪಿಸಿದರು?
ಪೊಲೀಸರು ಬಾಲಕನನ್ನು ಬಂಧಿಸಲು ಬಂದಾಗ ತಾರಾನಾಥರು ಇವನು ಕಳ್ಳನಲ್ಲ, ತಪ್ಪು ಮಾಡಿಲ್ಲ. ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ. ಏಕೆಂದರೆ ವಾಚನ್ನು ರಿಪೇರಿ ಮಾಡಿಸಲು ನಾನೇ ಅವನ ಕೈಲಿ ಕೊಟ್ಟು ಕಳಿಸಿದ್ದೆ. ನನ್ನ ಸಹೋದರನು ಮತ್ತು ಆ ವ್ಯಾಪಾರಿ ಇಬ್ಬರೂ ಸುಳ್ಳರೇ, ಅವರ ಮಾತನ್ನು ನಂಬಬೇಡಿ ಎಂದರು.  

6. ತಾರಾನಾಥರು ಬಾಲಕನ ತಪ್ಪನ್ನು ಏಕೆ ಕ್ಷಮಿಸಿದರು?
ತಾರಾನಾಥರಿಗೆ ಆ ಬಾಲಕನನ್ನು ಶಿಕ್ಷೆಗೆ ಒಳಪಡಿಸುವುದು ಇಷ್ಟವಿರಲಿಲ್ಲ. ಬಾಲಕನಿಗೆ ಅವನ ತಪ್ಪಿನ ಅರಿವು ಉಂಟಾಗಿ ಪಶ್ಚಾತ್ತಾಪವಾಗುತ್ತದೆ. ಅವನು ಪಂಡಿತ ತಾರಾನಾಥರ ಪಾದಕ್ಕೆ ಬಿದ್ದು ಗೊಳೋ ಎಂದು ಅಳುತ್ತಾನೆ. ಗುರುಗಳೇ ನನಗೆ ಶಿಕ್ಷೆ ಕೊಡಿಸಬೇಕಿತ್ತು ಎನ್ನಲು ತಾರಾನಾಥರು ಮಗು ತಪ್ಪು ಮಾಡುವುದು ಸಹಜ, ಈಗ ನಿನಗೆ ಅದರ ಅರಿವಾಯಿತಲ್ಲ ಅಷ್ಟೇ ಸಾಕು. ಚೆನ್ನಾಗಿ ಓದಿ ಚೆನ್ನಾಗಿ ಬದುಕು. ಅದೇ ನಿನಗೆ ಸಂತಸ ತರುತ್ತದೆ ಎಂದು ಬಾಲಕನ ತಪ್ಪನ್ನು ಕ್ಷಮಿಸಿದರು.  

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗಣೇಕಲ್ ಶಿವಯ್ಯನವರು ಕಳ್ಳರ ಮನಸ್ಸನ್ನು ಹೇಗೆ ಪರಿವರ್ತಿಸಿದರು?
ಗಣೇಕಲ್ ಶಿವಯ್ಯನವರು ಆಟ ಮುಗಿಸಿ ಸಂಭಾವನೆ ಪಡೆದು ಊರಿಗೆ ಮರಳುವಾಗ ದಾರಿಯಲ್ಲಿರುವ ಈಚಲ ಬನದಲ್ಲಿ ನಾಲ್ಕು ಜನ ಕಳ್ಳರು ಗಂಟು ಬೀಳುತ್ತಾರೆ. ಆಗ ನನ್ನ ತಾತನು ಹೆದರದೆ ಧೈರ್ಯದಿಂದ ಕಳ್ಳರನ್ನು ಕುರಿತು ಅಯ್ಯಾ ನಿಮಗೆ ಹಣಬೇಕು, ಅದು ನನ್ನಲ್ಲಿದೆ. ಅದನ್ನು ನಿಮಗೆ ಕೊಡುತ್ತೇನೆ, ಯಾವ ತಕರಾರೂ ಇಲ್ಲ. ಆದರೆ ನೀವು ನನ್ನ ಆಸೆಯನ್ನು ಪೂರೈಸಬೇಕು. ಆಗ ಕಳ್ಳರು ಹೇಳಿ ತಾತ ಖಂಡಿತವಾಗಿ ನಿಮ್ಮ ಆಸೆಯನ್ನು ಪೂರೈಸುತ್ತೇವೆ. ಅದೇನು ಹೇಳಿ ಎನ್ನಲು, ತಾತನು ಅದೇನೂ ಕಷ್ಟದಾಯಕವಲ್ಲ, ಕಿವಿಗಳಿಗೆ ಸುಖಕರವಾದುದು. ನೀವು ನಿಶ್ಚಿಂತೆಯಿಂದ ಕುಳಿತು ಅರ್ಧತಾಸು ನನ್ನ ಸಂಗೀತವನ್ನು ಕೇಳಬೇಕು. ಆಗಲಿ ತಾತ ಖಂಡಿತವಾಗಿಯೂ ಕೇಳುತ್ತೇವೆ. ಅದರಿಂದ ನಾವೇನೂ ಕಳೆದುಕೊಳ್ಳುವುದು ಇಲ್ಲವಲ್ಲ ಎಂದು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. ಹಳ್ಳದ ನೀರು ಜುಳುಜುಳು ಎಂದು ನಿಧಾನಕ್ಕೆ ಹರಿಯುತ್ತಲೇ ಇದೆ. ತಾತನು ಪಿಟೀಲು ಬಾರಿಸುತ್ತಾ ಮಧುರವಾದ ಕಂಠದಿಂದ ಹಾಡತೊಡಗಿದನು. ಬೈಜು ಹಾಡಿದಾಗ ಹಾರವನ್ನು ಹಾಕಿಸಿಕೊಂಡು ಹೋದ ಜಿಂಕೆಯು ಮರಳಿಬಂದು ಅವನ ಹಾಡು ಕೇಳುತ್ತಾ ಮೈ ಮರೆತು ನಿಂತಂತೆ ಆ ಕಳ್ಳರೂ ತಾತನ ಹಾಡಿಗೆ ಮೈಮರೆತು, ಕಣ್ಣು ಮುಚ್ಚಿಕೊಂಡು ತಲೆದೂಗುತ್ತಾ ಕುಳಿತುಕೊಂಡರು. ಅರ್ಧ ತಾಸೇನು ಒಂದು ತಾಸು ಆದರೂ ಅವರಿಗೆ ಎಚ್ಚರವಾಗಲೇ ಇಲ್ಲ.           
ಕೊನೆಗೆ ಎಚ್ಚೆತ್ತ ಕಳ್ಳರು ತಮ್ಮಲ್ಲಿರುವ ಹಣವನ್ನು ತೆಗೆದು ತಾತನ ಮುಂದೆ ಇಟ್ಟು ತಾತನ ಪಾದಕ್ಕೆ ಎರಗಿ ತಾತ ನಿಮ್ಮ ಹಣವು ನಮಗೆ ಬೇಡ, ನಿಮ್ಮ ಆಶೀರ್ವಾದವಷ್ಟೇ ಸಾಕು ಎಂದು ಹೊರಡತೊಡಗಿದರು. ಆಗ ತಾತನು ಅವರನ್ನು ತಡೆದು ಅಯ್ಯಾ ದಯಾಳುಗಳೇ ನಿಮ್ಮ ಹಣವು ನನಗೆ ಬೇಕಿಲ್ಲ, ನಿಮ್ಮ ಹಣದ ಜತೆಗೆ ನನ್ನ ಹಣವನ್ನೂ ಕೊಡುತ್ತೇನೆ. ಅದರಿಂದ ನಾಲ್ವರೂ ಒಟ್ಟುಗೂಡಿ ವ್ಯಾಪಾರ ಮಾಡುತ್ತಾ ಜೀವನ ನಡೆಸಿ. ಇನ್ನು ಮುಂದೆ ಈ ಕೆಟ್ಟ ಕಳ್ಳತನವನ್ನು ಮಾಡಬೇಡಿ, ಸತ್ಯವಂತರಾಗಿ ಬದುಕಿ ಎಂದು ಹೇಳಿ, ಅವರು ಕೊಟ್ಟ ಹಣದೊಂದಿಗೆ ತಮ್ಮ ಹಣವನ್ನೂ ಕೊಟ್ಟು ಆಶೀರ್ವದಿಸಿ ಕಳುಹಿಸುತ್ತಾರೆ.  ಹೀಗೆ ಗಣೇಕಲ್ ಶಿವಯ್ಯನವರು ಸಂಗೀತದ ಮೂಲಕ ಕಳ್ಳರ ಮನವನ್ನು ಪರಿವರ್ತಿಸಿದರು.  

2. ತಾರಾನಾಥರು ವಾಚನ್ನು ಕದ್ದ ಬಾಲಕನ ಮನಸ್ಸನ್ನು ಹೇಗೆ ಪರಿವರ್ತಿಸಿದರು?
ಪೋಲೀಸರು ಬಾಲಕನನ್ನು ಅರೆಸ್ಟು ಮಾಡಲು ಆಶ್ರಮಕ್ಕೆ ಬರುತ್ತಾರೆ. ಅದನ್ನು ಕೇಳಿ ತಾರಾನಾಥರಿಗೆ ಬಾಲಕನ ಮೇಲೆ ಕರುಣೆಯು ಉಕ್ಕಿ ಬರುತ್ತದೆ. ಅವನನ್ನು ಪೊಲೀಸರ ವಶಕ್ಕೆ ಕೊಡಬಾರದೆಂದು ನಿರ್ಧರಿಸಿ ಪೊಲೀಸರು ಬರುವುದನ್ನೇ ಕಾಯುತ್ತಾ ಕುಳಿತರು. ಅವರು ಬಂದು ವಿಚಾರಿಸಿದ ನಂತರ ಆ ಬಾಲಕನನ್ನು ಕರೆದು ಇವನು ಕಳ್ಳನಲ್ಲ, ತಪ್ಪು ಮಾಡಿಲ್ಲ. ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ. ಏಕೆಂದರೆ ವಾಚನ್ನು ರಿಪೇರಿ ಮಾಡಿಸಲು ನಾನೇ ಅವನ ಕೈಲಿ ಕೊಟ್ಟು ಕಳಿಸಿದ್ದೆ. ನನ್ನ ಸಹೋದರನು ಮತ್ತು ಆ ವ್ಯಾಪಾರಿ ಇಬ್ಬರೂ ಸುಳ್ಳರೇ, ಅವರ ಮಾತನ್ನು ನಂಬಬೇಡಿ ಎಂದು ಹೇಳಿ ಆ ಬಾಲಕನು ಶಿಕ್ಷೆ ಅನುಭವಿಸುವುದನ್ನು ತಪ್ಪಿಸುತ್ತಾರೆ.        
ಇದರಿಂದ ಆ ಬಾಲಕನಿಗೆ ಅರಿವು ಉಂಟಾಗಿ ಪಶ್ಚಾತ್ತಾಪವಾಗುತ್ತದೆ. ಅವನು ಪಂಡಿತ ತಾರಾನಾಥರ ಪಾದಕ್ಕೆ ಬಿದ್ದು ಗೊಳೋ ಎಂದು ಅಳುತ್ತಾನೆ. ಗುರುಗಳೇ ನನಗೆ ಶಿಕ್ಷೆ ಕೊಡಿಸಬೇಕಿತ್ತು ಎನ್ನಲು ತಾರಾನಾಥರು ಮಗು ತಪ್ಪು ಮಾಡುವುದು ಸಹಜ, ಈಗ ನಿನಗೆ ಅದರ ಅರಿವಾಯಿತಲ್ಲ ಅಷ್ಟೇ ಸಾಕು. ಚೆನ್ನಾಗಿ ಓದಿ ಚೆನ್ನಾಗಿ ಬದುಕು. ಅದೇ ನಿನಗೆ ಸಂತಸ ತರುತ್ತದೆ ಎಂದು ಅವನ ತಪ್ಪನ್ನು ಕ್ಷಮಿಸಿ ವಾಚನ್ನು ಕದ್ದ ಬಾಲಕನ ಮನಸ್ಸನ್ನು ಪರಿವರ್ತಿಸಿದರು.  

ಉ) ಸಂದರ್ಭದೊಡನೆ ವಿವರಿಸಿರಿ.

1. ನೀವು ನಿಶ್ಚಿಂತೆಯಿಂದ ಕುಳಿತು ಅರ್ಧತಾಸು ನನ್ನ ಸಂಗೀತವನ್ನು ಕೇಳಬೇಕು.
ಈ ವಾಕ್ಯವನ್ನು ಜಿ. ಎಸ್. ಬಸವರಾಜಶಾಸ್ತ್ರಿ ಅವರು ಬರೆದಿರುವ ಶಾಸ್ತ್ರಿ ಕನಸು ಎಂಬ ಕೃತಿಯಿಂದ ಆಯ್ದ ಪರಿವರ್ತನೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಗಣೇಕಲ್ ಶಿವಯ್ಯನವರು ಕಳ್ಳರಿಗೆ ಹೇಳಿದ್ದಾರೆ. ಗಣೇಕಲ್ ಶಿವಯ್ಯನವರು ಸಂಭಾವನೆ ಪಡೆದು ಊರಿಗೆ ಮರಳುವಾಗ ದಾರಿಯಲ್ಲಿ  ಕಳ್ಳರು ಗಂಟು ಬೀಳುತ್ತಾರೆ. ಆಗ ತಾತನು ಕಳ್ಳರನ್ನು ಕುರಿತು ಅಯ್ಯಾ ನಿಮಗೆ ಹಣಬೇಕು, ಅದು ನನ್ನಲ್ಲಿದೆ. ಅದನ್ನು ನಿಮಗೆ ಕೊಡುತ್ತೇನೆ, ಯಾವ ತಕರಾರೂ ಇಲ್ಲ. ಆದರೆ ನೀವು ನನ್ನ ಆಸೆಯನ್ನು ಪೂರೈಸಬೇಕು. ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ತಾತ ನಿಮ್ಮ ಹಣವು ನಮಗೆ ಬೇಡ. ನಿಮ್ಮ ಆಶೀರ್ವಾದವಷ್ಟೇ ಸಾಕು.
ಈ ವಾಕ್ಯವನ್ನು ಜಿ. ಎಸ್. ಬಸವರಾಜಶಾಸ್ತ್ರಿ ಅವರು ಬರೆದಿರುವ ಶಾಸ್ತ್ರಿ ಕನಸು ಎಂಬ ಕೃತಿಯಿಂದ ಆಯ್ದ ಪರಿವರ್ತನೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕಳ್ಳರು ಗಣೇಕಲ್ ಶಿವಯ್ಯನವರಿಗೆ ಹೇಳುತ್ತಾರೆ. ಗಣೇಕಲ್ ಶಿವಯ್ಯನವರು ಕಳ್ಳರಿಗೆ ನೀವು ಹಾಡನ್ನು ಕೇಳಬೇಕು ಎಂದಾಗ ಕಳ್ಳರು ಒಪ್ಪಿಗೆಯನ್ನು ನೀಡುತ್ತಾರೆ. ಅವರ ಹಾಡನ್ನು ಕೇಳುತ್ತಾ ಕಳ್ಳರು ಮೈಮರೆಯುತ್ತಾರೆ. ನಂತರ ಅವರಿಗೆ ಎಚ್ಚರವಾದ ಸಂದರ್ಭದಲ್ಲಿ  ಈ ಮೇಲಿನ ಮಾತು ಬಂದಿದೆ.

3. ಇವನು ಕಳ್ಳನಲ್ಲ. ತಪ್ಪು ಮಾಡಿಲ್ಲ. ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ.

ಈ ವಾಕ್ಯವನ್ನು ಜಿ. ಎಸ್. ಬಸವರಾಜಶಾಸ್ತ್ರಿ ಅವರು ಬರೆದಿರುವ ಶಾಸ್ತ್ರಿ ಕನಸು ಎಂಬ ಕೃತಿಯಿಂದ ಆಯ್ದ ಪರಿವರ್ತನೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ತಾರಾನಾಥರು ಪೊಲೀಸರಿಗೆ ಹೇಳುತ್ತಾರೆ. ಪೋಲೀಸರು ಬಾಲಕನನ್ನು ಅರೆಸ್ಟು ಮಾಡಲು ಆಶ್ರಮಕ್ಕೆ ಬರುತ್ತಾರೆ. ಅದನ್ನು ಕೇಳಿ ತಾರಾನಾಥರಿಗೆ ಬಾಲಕನ ಮೇಲೆ ಕರುಣೆಯು ಉಕ್ಕಿ ಬರುತ್ತದೆ. ಅವನನ್ನು ಪೊಲೀಸರ ವಶಕ್ಕೆ ಕೊಡಬಾರದೆಂದು ನಿರ್ಧರಿಸಿ ಪೊಲೀಸರು ಬರುವುದನ್ನೇ ಕಾಯುತ್ತಾ ಕುಳಿತರು. ಅವರು ಬಂದು ವಿಚಾರಿಸಿದ ನಂತರ ಆ ಬಾಲಕನನ್ನು ಕರೆದು ಈ ಮೇಲಿನ ಮಾತನ್ನು ಹೇಳುತ್ತಾರೆ.

4. ಗುರುಗಳೇ ನನಗೆ ಶಿಕ್ಷೆ ಕೊಡಿಸಬೇಕಿತ್ತು.
ಈ ವಾಕ್ಯವನ್ನು ಜಿ. ಎಸ್. ಬಸವರಾಜಶಾಸ್ತ್ರಿ ಅವರು ಬರೆದಿರುವ ಶಾಸ್ತ್ರಿ ಕನಸು ಎಂಬ ಕೃತಿಯಿಂದ ಆಯ್ದ ಪರಿವರ್ತನೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ವಾಚನ್ನು ಕದ್ದ ಬಾಲಕ ತಾರಾನಾಥರಿಗೆ ಹೇಳುತ್ತಾನೆ. ಪೊಲೀಸರು ಬಂದಾಗ ತಾರಾನಾಥರು ಇವನು ಕಳ್ಳನಲ್ಲ, ತಪ್ಪು ಮಾಡಿಲ್ಲ. ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ. ಎಂದಾಗ ಆ ಬಾಲಕನಿಗೆ ಅರಿವು ಉಂಟಾಗಿ ಪಶ್ಚಾತ್ತಾಪವಾಗುತ್ತದೆ. ಆಗ ಅವನು ಪಂಡಿತ ತಾರಾನಾಥರ ಪಾದಕ್ಕೆ ಬಿದ್ದು ಗೊಳೋ ಎಂದು ಅಳುತ್ತಾ ಈ ಮೇಲಿನ ಮಾತನ್ನು ಹೇಳುತ್ತಾನೆ.   

ಟಿಪ್ಪಣಿ :

ಬೈಜು : 16 ನೇ ಶತಮಾನದಲ್ಲಿದ್ದ ಗ್ವಾಲಿಯರಿನ ಒಬ್ಬ ಪ್ರಸಿದ್ಧ ಗಾಯಕ. ಈತನ ಪೂರ್ಣ ಹೆಸರು ಬೈಜೂಬಾವರಾ. ತಾನಸೇನನ ಸಮಕಾಲೀನ. ಸಂಗೀತ ವಿದ್ವಾಂಸ. ಈತ ಸ್ವಾಮಿ ಹರಿದಾಸರ ಶಿಷ್ಯನಾಗಿದ್ದನು.  ಬೈಜು ಮತ್ತು ತಾನಸೇನನಿಗೂ ಒಮ್ಮೆ ಸಂಗೀತ ಸ್ಪರ್ಧೆ ನಡೆಯಿತೆಂದು ಚಿಕ್ಕ ಕಥೆ ಇದೆ. ಆ ಸ್ಪರ್ಧೆಯಲ್ಲಿ ಅರಮನೆಯಿಂದ ದೂರ ಕಳುಹಿಸಿದ ಜಿಂಕೆಯನ್ನು ಬೈಜು ತನ್ನ ಗಾಯನದ ಮೂಲಕ ಆಕರ್ಷಿಸಿ ಹಿಂತಿರುಗುವಂತೆ ಮಾಡಿದನು ಎಂದು ಹೇಳಲಾಗುತ್ತದೆ.

ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ಸನ್ಮಾರ್ಗ : ಮಕ್ಕಳಾದ ನಾವು ಸನ್ಮಾರ್ಗದಲ್ಲಿ ನಡೆಯಬೇಕು.
2. ಮೈಮರೆ : ಕಳ್ಳರು ಸಂಗೀತವನ್ನು ಕೇಳುತ್ತಾ ಮೈಮರೆತರು.
4. ತಲೆದೂಗು : ಕಳ್ಳರು ತಾತನ ಸಂಗೀತಕ್ಕೆ ತಲೆದೂಗಿದರು.
5. ದಯಾಳು : ತಾರಾನಾತರು ದಯಾಳುವಂತರಾಗಿದ್ದರು.
6. ಪರೋಪಕಾರಿ : ನಮ್ಮ ತಂದೆಯವರು ಪರೋಪಕಾರಿಗಳಾಗಿದ್ದಾರೆ.
7. ವ್ಯಸನ  : ನಾವು ಕಷ್ಟಕ್ಕೀಡಾದಾಗ ವ್ಯಸನ ಪಡಬೇಕಾಗುತ್ತದೆ.  
8. ಪರಿವರ್ತನೆ : ಸಂಗೀತದಿಂದ ಕಳ್ಳರ ಮನಸ್ಸು ಪರಿವರ್ತನೆಗೊಂಡಿತು.  

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.
ನಿಶ್ಚಿಂತೆ - ಚಿಂತೆ,        
ಸನ್ಮಾರ್ಗ -  ದುರ್ಮಾರ್ಗ,       
ಅಸಾಧ್ಯ - ಸಾಧ್ಯ,    
ಧೈರ್ಯ - ಅಧರ್ಮ,      
ವಿದೇಶಿ - ಸ್ವದೇಶಿ,         
ವಿದ್ಯಾವಂತ - ಅವಿದ್ಯಾವಂತ.  

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
1. ಪರೋಪಕಾರಿ = ಪರ + ಉಪಕಾರ,            
2. ತಲೆದೂಗು = ತಲೆ + ತೂಗು,          
3. ಒಟ್ಟುಗೂಡಿ  = ಒಟ್ಟು + ಕೂಡಿ,              
4. ಸಹೋದರ = ಸಹ + ಉದರ.  

ಈ) ಕೆಳಗಿನ ಮಾದರಿಯಂತೆ ವಂತ ಪ್ರತ್ಯಯ ಸೇರಿರುವ ಪದಗಳನ್ನು ಪಟ್ಟಿಮಾಡಿರಿ.
ಮಾದರಿ :
ಸತ್ಯ + ವಂತ = ಸತ್ಯವಂತ,    
ನೀತಿ + ವಂತ = ನೀತಿವಂತ,    
ಗುಣ + ವಂತ = ಗುಣವಂತ,        
ಹಣ + ವಂತ  = ಹಣವಂತ,    
ಬುದ್ಧಿ + ವಂತ = ಬುದ್ಧಿವಂತ,    
ಸಿರಿ + ವಂತ = ಸಿರಿವಂತ,     
ಆರೋಗ್ಯ + ವಂತ = ಆರೋಗ್ಯವಂತ,         
ಐಶ್ವರ್ಯ + ವಂತ = ಐಶ್ವರ್ಯವಂತ

4. ಸೈದ್ಧಾಂತಿಕ ವ್ಯಾಕರಣ :
ವಚನಗಳು : ವ್ಯಾಕರಣ ಪರಿಭಾಷೆಯಲ್ಲಿ ವಚನ ಎಂದರೆ ಸಂಖ್ಯೆ. ಕನ್ನಡ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬುದಾಗಿ ಎರಡು ವಿಧಗಳಿವೆ.
 
1. ಏಕವಚನ : ಒಂದು ಎಂದು ಹೇಳಲಾಗುವ ಶಬ್ದಗಳೆಲ್ಲವೂ ಏಕವಚನ ಎಂದು ಕರೆಸಿಕೊಳ್ಳುತ್ತವೆ. ಉದಾ : ಹುಡುಗ, ಹುಡುಗಿ, ಅರಸು, ಮರ, ಅಣ್ಣ, ನೀನು, ಅವನು, ಅವಳು.
2. ಬಹುವಚನ : ಒಂದಕ್ಕಿಂತ ಹೆಚ್ಚು ಎಂದು ಹೇಳಲಾಗುವ ಶಬ್ದಗಳೆಲ್ಲವೂ ಬಹುವಚನ ಎಂದು ಕರೆಸಿಕೊಳ್ಳುತ್ತವೆ.

ಬಹುವಚನ ಪದಗಳನ್ನು ಬರೆಯಿರಿ.
ಉದಾ : ಮನೆ + ಗಳು = ಮನೆಗಳು
ಹುಡುಗ + ಅರು = ಹುಡುಗರು
ಅಣ್ಣ + ಅಂದಿರು = ಅಣ್ಣಂದಿರು

ವಾಕ್ಯ ರಚನೆ :
ಕರ್ತೃ, ಕರ್ಮ ಹಾಗೂ ಕ್ರಿಯಾ ಪದಗಳಿಂದ ಕೂಡಿದ ಪದಸಮೂಹವನ್ನು ವಾಕ್ಯ ಎಂದು ಹೇಳಲಾಗುತ್ತದೆ.  ಈ ಕೆಳಗಿನ ವಾಕ್ಯಗಳಲ್ಲಿರುವ ಕರ್ತೃ, ಕರ್ಮ ಹಾಗೂ ಕ್ರಿಯಾ ಪದಗಳನ್ನು ಗುರುತಿಸಿರಿ.

You Might Like

Post a Comment

0 Comments