Recent Posts

ಸುಕ್ರಿ ಬೊಮ್ಮನ ಗೌಡ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ಸುಕ್ರಿ ಬೊಮ್ಮನ ಗೌಡ

ಕೃತಿಕಾರರ ಪರಿಚಯ :
?  ಶಾಂತಿ ನಾಯಕ ಅವರು 1943 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೇಲೇಕೇರಿಯಲ್ಲಿ ಜನಿಸಿದರು.  
?  ಇವರು. ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಉತ್ತರಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು, ಜಾಣೆ ಕನ್ನಡವ ತಿಳಿದ್ಹೇಳೆ, ಜಾನಪದ ಸುಧಾ ಸಂಚಯ, ಕಾಗಕ್ಕ ಗುಬ್ಬಕ್ಕ, ಜಾನಪದ ವೈದ್ಯಕೀಯ ಅಡುಗೆಗಳು, ರಂಗೋಲಿ, ಕುಡಿತ ನಿಮಗೆಷ್ಟು ಹಿತ, ದೇವಕಿ ಓದಿದಳು, ಜೀವ ಉಳಿಸುವ ಮರಗಳು, ಸುಕ್ರಿ ಬೊಮ್ಮನಗೌಡ  ಕೃತಿಗಳನ್ನು ಬರೆದಿದ್ದಾರೆ.  
?  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಜಾನ ಪದ ತಜ್ಞೆ, ಮಲ್ಲಿಕಾ ಪ್ರಶಸ್ತಿ, ಪದ್ಮಭೂಷಣ ಡಾ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವು ಗೌರವಗಳೂ ಲಭಿಸಿವೆ.
?  ಪ್ರಸ್ತುತ ಪಾಠವನ್ನು ಇವರ ಸುಕ್ರಿ ಬೊಮ್ಮನಗೌಡ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ.  

ಟಿಪ್ಪಣಿಗಳು :
1. ತಾರ್ಲೆ ಕುಣಿತ : ಮಳೆ ಬಾರದಿದ್ದಾಗ ಹಾಲಕ್ಕಿ ಒಕ್ಕಲಗಿತ್ತಿಯರು ಮಳೆಗಾಗಿ ದೇವರನ್ನು ಪ್ರಾರ್ಥಿಸುವ ವಿಶಿಷ್ಟ ನರ್ತನ.
2. ಕುಂಬರಿ ಬೇಸಾಯ : ಕಾಡು ಕಡಿದು, ನೆಲವನ್ನು ಬೆಂಕಿಯಿಂದ ಸುಟ್ಟು ಬೇಸಾಯ ಮಾಡುವ ಪದ್ಧತಿ. ಕುಂಬರಿ ಬೇಸಾಯದಿಂದಾಗಿ ಕಾಡು ನಾಶವಾಗುತ್ತದೆಯೆಂದು 1885 ರ ಹೊತ್ತಿಗೆ ಬ್ರಿಟೀಷರು ಈ ಪದ್ಧತಿಯನ್ನು ಪ್ರತಿಬಂಧಿಸಿದರು. ಆದರೂ ಸುಕ್ರಿಯ ಇತ್ತೀಚಿನ ಕಾಲಮಾನದವರೆಗೂ ಈ ಬೇಸಾಯ ಜೀವ ಹಿಡಿದುಕೊಂಡಿತ್ತು.                                  
ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅಚರ - ಸ್ಥಿರ; ಅಚಲ.                                 
ಅಣಿ - ಸಿದ್ಧತೆ
ಒಕ್ಕಲ - ಮನೆತನ; ಬೇಸಾಯ.                           
ಗದ್ದೆ - ಜಮೀನು; ಬೇಸಾಯದ ಭೂಮಿ.
ಗಣಿ - ಆಶ್ರಯಸ್ಥಾನ                                  
ಗವಿಯಗಳೆಲ್ಲ - ಕಾಡಿನ ಜೀವಿಗಳೆಲ್ಲ
ಚಣ್ಣಮೊಳೆ - ಜೋರಾದ ಮಳೆ                           
ಚರ - ಚಲಿಸು
ಪರಂಪರಾಗತ - ಹಿಂದಿನವರಿಂದ ಬಂದಿರುವ                 
ಪೂರ್ವಜರು - ವಂಶದ ಹಿರಿಯರು.
ಬಂಜೆತನ - ಮಕ್ಕಳಾಗದಿರುವುದು                         
ಬೆದೆ - ಬಿತ್ತನೆಗೆ ಹದವಾದ ಕಾಲ.
ಬುಡಕಟ್ಟು - ಮೂಲ ಜನಾಂಗ                           
ಮುಂಚೂಣಿ - ಮುಂದಾಳತ್ವ; ನಾಯಕತ್ವ                    
ಸುಗ್ಗಿ - ಧಾನ್ಯಗಳ ಕೊಯ್ಲಿನ ಕಾಲ                         
ಹನಿಸದೆ - ಬೀಳದೆ
ಹಯನಾಗು - ಸಮೃದ್ಧವಾಗು                            
ಹಲ್ಗತ್ತಿ - ಹಲ್ಲುಗಳಿರುವ ಕತ್ತಿ
ಹಾಳೆ - ಗದ್ದೆಯ ಸೀಳು                                
ಹೆಕ್ಕಿ - ಆರಿಸು ಹೊಟ್ಟೆ
ಪಾಡು - ಜೀವನೋಪಾಯ                         
ಹೊಯ್ಯಲೆ - ಸುರಿಯುವುದು
ಮಕ್ಕಿಕತ್ತಿ - ಬೆಳೆ ಬೆಳೆದಿರುವ ಎತ್ತರದ ಭೂಮಿ.                
ಸವ್ದೆ - ಉರುವಲು ಕಟ್ಟಿಗೆ

ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಸುಕ್ರಿಯ ತಂದೆ ತಾಯಿಗಳ ಹೆಸರೇನು?
ಸುಕ್ರಿಯ ತಂದೆ ತಾಯಿಗಳ ಹೆಸರು ಸುಬ್ಬ ಮತ್ತು ದೇವಿ.

2. ಸುಕ್ರಿಯ ತಂದೆಯಲ್ಲಿದ್ದ ಜಾನಪದ ಕಲೆಗಳಾವುವು?
ಸುಕ್ರಿಯ ತಂದೆ ಗುಮಟೆ ವಾದ್ಯಗಾರಿಕೆಯನ್ನು, ಸುಗ್ಗಿ ನೃತ್ಯಗಾರಿಕೆಯನ್ನು ಬಲ್ಲವರಾಗಿದ್ದರು.

3. ಲೇಖಕರಿಗೆ ಸುಕ್ರಿ ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು ಯಾವುದು?
ಲೇಖಕರಿಗೆ ಸುಕ್ರಿ ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು ಕಟ್ಟಾಡೇ ಕುಟ್ಟಾಡೆ ಕಟ್ಟಿದ್ರೆ ಚೂಡಾಡೇ.

4. ಸುಕ್ರಿಯವರಿಗೆ ದೊರೆತ ನಾಡಿನ ಅತ್ಯುನ್ನತ ಪ್ರಶಸ್ತಿ ಯಾವುದು?
ಸುಕ್ರಿಯವರಿಗೆ ದೊರೆತ ನಾಡಿನ ಅತ್ಯುನ್ನತ ಪ್ರಶಸ್ತಿ ನಾಡೋಜ ಪ್ರಶಸ್ತಿ.

5. ಸುಕ್ರಿಯವರಲ್ಲಿ ಕಾಣಬರುವ ವಿಶೇಷ ಗುಣ ಯಾವುದು?
ಸುಕ್ರಿಯವರ ಪೂರ್ವಜರು ಕಾಡಿನಲ್ಲಿ ನೆಲೆಸಿ ಪಡೆದ ಅನುಭವವೂ ಪರಂಪರಾಗತವಾಗಿ ಇವರ ಬಳಿಗೆ ಬಂದಿದೆ. ಇದು ಇವರ ವಿಶೇಷ ಗುಣ.

6. ಸುಕ್ರಿ ಯಾವ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?
ಸುಕ್ರಿ  ಹಾಲಕ್ಕಿ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ.  

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸುಕ್ರಿ ಬಾಲ್ಯದಲ್ಲಿ ಜನಪದ ಆಟಗಳನ್ನು ಹೇಗೆ ಕಲಿತಳು?
ಸುಕ್ರಿ ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು. ಸಗಣಿ ಹೆಕ್ಕಿ ಸುಸ್ತಾಗದ ಈ ಮಕ್ಕಳು ತಮ್ಮ ಸಗಣಿ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನೆ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಅಟ್ಟೆ ಆಟ; ಕಣ್ಕಟ್ಟಾಟ; ಹುಳ್ಕಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು. ಈ ರೀತಿ ಬಾಲ್ಯದಲ್ಲಿಯೇ ಸುಕ್ರಿ ಜನಪದ ಆಟಗಳನ್ನು ಕಲಿತರು.

2. ತಾರ್ಲೆ ಕುಣಿತದ ವಿಶೇಷವೇನು?
ಮಳೆ ಬಾರದಿದ್ದಾಗ ಹಾಲಕ್ಕಿ ಒಕ್ಕಲಗಿತ್ತಿಯರು ಮಳೆಗಾಗಿ ದೇವರನ್ನು ಪ್ರಾರ್ಥಿಸುವ ವಿಶಿಷ್ಟ ನರ್ತನ. ಈ ಹಾಡಿನಲ್ಲಿ ಬೆಳತನಕ ಹಾಡಬಲ್ಲ ಸಾಹಿತ್ಯವಿದೆ. ಜನ ಜೀವನದ ಚಿತ್ರವಿದೆ. ಕೇಳುಗರಿಲ್ಲ ದಾಖಲಿಸುವವರಿಲ್ಲ,

3. ಸುಕ್ರಿಯವರಿಗೆ ಯಾವ ಯಾವ ಸೊಪ್ಪುಗಳ ಜ್ಞಾನವಿದೆ?
ಚಿರಕಲ, ಹಳ್ಚೆರಿ, ಪೆಪೆ, ಸಗಡೆ, ಹಪ್ಸಗಡೆ, ಕುಚುಮಾಲೆ, ಏಕನಾಯಕ, ಅಡಕೋಳಿ ಮುಂತಾದ ಸೊಪ್ಪುಗಳ ಜ್ಞಾನ ಸುಕ್ರಿಯವರಿಗೆ ಇತ್ತು.

4. ಸುಕ್ರಿಯವರು ಪಾಲ್ಗೊಂಡ ಚಳುವಳಿಗಳಾವುವು?
ಸುಕ್ರಿ ರೈತರ ಜೊತೆ ಕಾಲ್ನಡಿಗೆಯಲ್ಲಿಯೇ ಕಾರವಾರಕ್ಕೆ ಹೋಗಿ ಚಳುವಳಿ ನಡೆಸಿದರು. ಸಮಾಜಕ್ಕೆ ಒಳಿತಾಗುವ ಎಲ್ಲ ಚಳುವಳಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಂತರು. ಕೋಟೆಬಾವಿ ಚಳುವಳಿ, ಬುಡಕಟ್ಟು ಜಿಲ್ಲಾ ಚಳುವಳಿ, ಸಾಕ್ಷರತಾ ಆಂದೋಲನ, ಮದ್ಯಪಾನ ವಿರೋಧಿ ಚಳುವಳಿಗಳಲ್ಲಿ ಸುಕ್ರಿಯವರ ಕಲಾ ತಂಡ ಪಾಲ್ಗೊಂಡಿರುತ್ತಿತ್ತು.

5. ಸುಕ್ರಿಯವರ ವೇಷಭೂಷಣಗಳು ಹೇಗಿರುತ್ತವೆ?
ಸುಕ್ರಿಯವರು ಕೊರಳ ತುಂಬ ಅಂಕೋಲೆಯ ಪರಂಪರಾಗತ ಶೈಲಿಯಲ್ಲಿ ಮಣಿಸರಗಳನ್ನು ಧರಿಸಿ ಅಲ್ಲಿಯ ಹಾಲಕ್ಕಿ ಒಕ್ಕಲ ಗೇಟ್ಗಿ ಶೈಲಿಯಲ್ಲಿ ಸೀರೆಯುಟ್ಟಿರುತ್ತಾರೆ.  

6. ಸುಕ್ರಿಯವರಿಗೆ ದೊರೆತ ಪ್ರಶಸ್ತಿಗಳಾವುವು?
ಸುಕ್ರಿಯವರಿಗೆ ನಾಡಿನ ಬಹುದೊಡ್ಡ ಪ್ರಶಸ್ತಿಗಳಾದ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಸುಕ್ರಿಯವರ ಮುಡಿಗೇರಿದವು. ಇವರಿಗೆ ನಾಡಿನ ಅತ್ಯುನ್ನತ  ನಾಡೋಜ ಪ್ರಶಸ್ತಿಯು 2007 ರಲ್ಲಿ ದೊರೆತಿದೆ.  

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸುಕ್ರಿಯವರು ಜಾನಪದದ ಗಣಿ ಆದುದು ಹೇಗೆ?
ಸುಕ್ರಿಯ ಅಕ್ಕ ಮತ್ತು ತಾಯಿ ಉತ್ತಮ ಹಾಡುಗಾರರಾಗಿದ್ದರು. ಅಪ್ಪ ಗುಮಟೆ ವಾದ್ಯಗಾರಿಕೆಯನ್ನು ಸುಗ್ಗಿ ನೃತ್ಯಗಾರಿಕೆಯನ್ನು ಬಲ್ಲವರಾಗಿದ್ದರು. ಸುಕ್ರಿಯೂ ಶಾಲೆ ಕಲಿತವಳಲ್ಲ. ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು. ಸಗಣಿ ಹೆಕ್ಕಿ ಸುಸ್ತಾಗದ ಈ ಮಕ್ಕಳು ತಮ್ಮ ಸಗಣಿ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನೆ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಅಟ್ಟೆ ಆಟ; ಕಣ್ಕಟ್ಟಾಟ; ಹುಳ್ಕಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು. ಇಲ್ಲಿಯೇ ಸುಕ್ರಿ ಹೆಣ್ಣುಮಕ್ಕಳ ಜೊತೆ ತಾರ್ಲೆ ಕುಣಿದರು. ಗೊಬ್ಬರಹಾಕಿ ಹಾಳೆ ಕೊಚ್ಚಿ ಹೂಡಿ ಬೀಜಬಿತ್ತಲು ಅಣಿ ಮಾಡಿಕೊಂಡಿರುವಾಗ ಮಳೆರಾಯ ಬೆದೆಬಂದ ಭೂಮಿಗೆ ನೀರು ಹನಿಸದೆ ಮೋಡಗಟ್ಟಿ ಮುನಿಸಿನಲ್ಲಿರುತ್ತಾನೆ. ಆಗ ಮಳೆರಾಯನನ್ನು ಒಲಿಸಿಕೊಳ್ಳಲು ಆಯಾ ಊರಿನ ಹೆಂಗಸರು ಪುರಸೊತ್ತು ಆದ ದಿನ ತಮ್ಮೊಳಗೆ ಮಾತಾಡಿಕೊಂಡು ಕತ್ತಲೆಯಾದ ಬಳಿಕ ಬಯಲಿಗಿಳಿಯುತ್ತಾರೆ; ಹಾಡುತ್ತ ಕುಣಿಯುತ್ತಾರೆ. ಈ ರೀತಿ ಸುಕ್ರಿ ಜಾನಪದ ಗಣಿಯಾದರು.

2. ಸುಕ್ರಿಗೆ ಕಾಡಿನ ಸಸ್ಯಜ್ಞಾನ ಹೇಗೆ ದೊರೆಯಿತು?
ಸುಕ್ರಿ ಪ್ರಾಣಿ, ಪಕ್ಷಿ ಮುಂತಾದ ಚರಜೀವಿಗಳ, ಸಸ್ಯಾದಿ ಅಚರ ಜೀವವೈವಿಧ್ಯದ ಜ್ಞಾನ ನಿಧಿ. ಅಪ್ಪ ಬೆಟ್ಟದಲ್ಲಿರುವ ಒಡೆಯನ ಗದ್ದೆಯನ್ನು ಹೂಡಲು ಹೋಗುತ್ತಿದ್ದಾಗ ತಾಯಿ ಹಾಗೂ ಮನೆಯ ಸದಸ್ಯರು ಕೃಷಿ ಕೆಲಸಕ್ಕೆ ಹೊರಡುತ್ತಿದ್ದರು. ಸುಕ್ರಿ ತನ್ನ ಸುಮಾರು ಹತ್ತನೆಯ ವರ್ಷಕ್ಕೆ ಇವರ ಜೊತೆಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ಸೊಂಟಕ್ಕೆ ತಾಡಿದ ಚಿಕ್ಕ ಸುಳಿಮುಟ್ಟಿ ; ಈ ಮುಟ್ಟಿಯಲ್ಲೊಂದು ಚಿಕ್ಕ ಹಲ್ಗತ್ತಿ ಇವರ ಜೊತೆಯಲ್ಲಿರುತ್ತಿತ್ತು. ಬೆಟ್ಟದಲ್ಲಿ ನಡೆಯುವಾಗ, ಹಾದಿಯ ಇಕ್ಕೆಲಗಳಲ್ಲಿಯ ಮರಗಿಡಗಳು ಇವರಿಗೆ ಆಪ್ತವಾದವು.  ಚಿರಕಲ, ಹಳ್ಚೆರಿ, ಪೆಪೆ, ಸಗಡೆ, ಹಪ್ಸಗಡೆ, ಕುಚುಮಾಲೆ, ಏಕನಾಯಕ, ಅಡಕೋಳಿ  ಮುಂತಾದ ಸೊಪ್ಪುಗಳ ಜ್ಞಾನ ಇವರಿಗಾಯಿತು. ದೊಡ್ಡವರಾದ ಮೇಲೆ ಸೌದೆ ತರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಮರಮುಟ್ಟುಗಳ ಇನ್ನಷ್ಟು ಜ್ಞಾನ ಇವರ ಮಡಿಲು ತುಂಬಿದವು. ಸುಕ್ರಿಯವರ ಜೊತೆ ಕಾಡಿನಲ್ಲಿ ನಡೆಯುವುದೊಂದು ಅಪೂರ್ವ ಅನುಭವ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಔಷಧಶಾಸ್ತ್ರ ಮುಂತಾದ ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ. ಸುಕ್ರಿ ಪ್ರತಿ ಗಿಡಕ್ಕೂ ತನ್ನ ಪರಿಸರದ ಕನ್ನಡ ಜನಪದ ಹೆಸರುಗಳನ್ನು ಹೇಳುತ್ತ ಆಯಾ ಸಸ್ಯಗಳನ್ನು ತೋರಿಸುತ್ತ ಸಾಗುತ್ತಾರೆ. ಇವರ ಈ ಸಸ್ಯಜ್ಞಾನ ನಿಧಿಯನ್ನು ಅಕ್ಷರಕ್ಕಿಳಿಸಿದರೆ ಹಲವು ಗ್ರಂಥಗಳು ಸಿದ್ಧವಾಗಬಹುದು.

3. ಸುಕ್ರಿ ಬೊಮ್ಮನಗೌಡ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ ಎಂಬುದನ್ನು ಹೇಗೆ ಹೇಳಬಹುದು?
ಸುಕ್ರಿ ರೈತರ ಜೊತೆ ಕಾಲ್ನಡಿಗೆಯಲ್ಲಿಯೇ ಕಾರವಾರಕ್ಕೆ ಹೋಗಿ ಚಳುವಳಿ ನಡೆಸಿದರು. ಸಮಾಜಕ್ಕೆ ಒಳಿತಾಗುವ ಎಲ್ಲ ಚಳುವಳಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಂತರು. ಕೋಟೆಬಾವಿ ಚಳುವಳಿ, ಬುಡಕಟ್ಟು ಜಿಲ್ಲಾ ಚಳುವಳಿ, ಸಾಕ್ಷರತಾ ಆಂದೋಲನ, ಮದ್ಯಪಾನ ವಿರೋಧಿ ಚಳುವಳಿಗಳಲ್ಲಿ ಸುಕ್ರಿಯವರ ಕಲಾ ತಂಡ ಪಾಲ್ಗೊಂಡಿರುತ್ತಿತ್ತು. ಓದು-ಬರಹ ಅರಿಯದವರಾದರೂ ಸಾಮಾಜಿಕ ಕೆಡಕು ಯಾವುದು, ಒಳಿತು ಯಾವುದು ಎಂಬುದರ ಅರಿವುಳ್ಳವರು. ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಸುಕ್ರಿಯದು ಎತ್ತಿದ ಕೈ. ಇವರು ಕೊರಳ ತುಂಬ ಅಂಕೋಲೆಯ ಪರಂಪರಾಗತ ಶೈಲಿಯಲ್ಲಿ ಮಣಿಸರಗಳನ್ನು ಧರಿಸಿ ಅಲ್ಲಿಯ ಹಾಲಕ್ಕಿ ಒಕ್ಕಲ ಗೇಟ್ಗಿ ಶೈಲಿಯಲ್ಲಿ ಸೀರೆಯುಟ್ಟು ಮುಂಚೂಣಿಯಲ್ಲಿದ್ದಾರೆಂದರೆ ಚಳುವಳಿಕಾರರಿಗೆ ಆನೆಬಲ ಬರುತ್ತದೆ.  

ಈ) ಸಂದರ್ಭದೊಡನೆ ವಿವರಿಸಿರಿ.

1. ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು.
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕಿಯವರು ಸುಕ್ರಿಯ ಬಾಲ್ಯದ ಬಗ್ಗೆ ತಿಳಿಸುತ್ತಾ ಹೇಳಿದ್ದಾರೆ. ಸುಕ್ರಿಯೂ ಶಾಲೆ ಕಲಿತವಳಲ್ಲ. ಚಿಕ್ಕವಳಿರುವಾಗ ತನ್ನ ಕೇರಿಯ ಮಕ್ಕಳ ಜೊತೆಗೆ ಸಗಣಿ ತರಲು ಹೋಗುತ್ತಿದ್ದಳು. ಸಗಣಿ ಹೆಕ್ಕಿ ಸುಸ್ತಾಗದ ಈ ಮಕ್ಕಳು ತಮ್ಮ ಸಗಣಿ ಬುಟ್ಟಿಗಳನ್ನು ಗದ್ದೆ ಬಯಲಿನಲ್ಲಿಟ್ಟು ಗದ್ದೆ ಬಯಲನ್ನೆ ಕ್ರೀಡಾಂಗಣವನ್ನಾಗಿಸಿಕೊಳ್ಳುತ್ತಿದ್ದರು. ಅಟ್ಟೆ ಆಟ; ಕಣ್ಕಟ್ಟಾಟ; ಹುಳ್ಕಿ ಮಂಡದ ಆಟಗಳಿಗೆ ಈ ಬಯಲುಗಳೇ ಜನಪದ ಆಟಗಳ ತರಬೇತಿ ಶಾಲೆಗಳಾದವು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ.
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ. ಸುಕ್ರಿಯವರೊಡನೆ ಲೇಖಕಿಯವರು ಕಾಡಿನಲ್ಲಿ ಹೆಜ್ಜೆ ಹಾಕುತ್ತಿರುವಾಗ ಸುಕ್ರಿಯವರು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಔಷಧಶಾಸ್ತ್ರ ಮುಂತಾದವುಗಳ ಬಗ್ಗೆ ಅವರಿಗಿದ್ದ ಜ್ಞಾನ ಕಂಡು ಲೇಖಕಿಯವರು ಈ ಮೇಲಿನ ಮಾತನ್ನು ಹೇಳಿದ್ದಾರೆ.

3. ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚೂಡಾಡೆ
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ. ಸುಕ್ರಿಯವರು ಸಾಮಾನ್ಯ ಹುಲ್ಲುಕಡ್ಡಿಗಳ ಬಗ್ಗೆಯೂ ಚೆನ್ನಾಗಿ ಬಲ್ಲರು. ಒಮ್ಮೆ ನನ್ನ ಜೊತೆ ಬಯಲಿನಲಿ ನಡೆಯುತ್ತಿದ್ದಾಗ ಸುಕ್ರಿ ಒಂದು ಜಾತಿಯ ಹುಲ್ಲಿನ ಉದ್ದದೇಟಿನ ಹತ್ತಾರು ಹೂ ತೆನೆಗಳನ್ನು ಕೊಯ್ದುಕೊಂಡು ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚೂಡಾಡೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

4. ಚಳುವಳಿಗಾರರಿಗೆ ಆನೆಬಲ ಬರುತ್ತದೆ.
ಈ ವಾಕ್ಯವನ್ನು ಶಾಂತಿ ನಾಯಕ ಅವರು ಬರೆದಿರುವ ಸುಕ್ರಿ ಬೊಮ್ಮನ ಗೌಡ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಲೇಖಕಿಯವರು ಹೇಳಿದ್ದಾರೆ. ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಸುಕ್ರಿಯದು ಎತ್ತಿದ ಕೈ. ಸುಕ್ರಿಯವರು ಚಳುವಳಿಗೆ ಮುಂಚೂಣಿಯಲ್ಲಿದ್ದಾರೆಂದರೆ ಚಳುವಳಿಕಾರರಿಗೆ ಆನೆಬಲ ಬರುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.  
ಸುಸ್ತಾಗದ = ಸುಸ್ತು + ಆಗದ,     
ಕ್ರೀಡಾಂಗಣ = ಕ್ರೀಡಾ + ಅಂಗಣ,    
ಹಲ್ಗತ್ತಿ = ಹಲ್ಲು + ಕತ್ತಿ,
ಕಣ್ಕಟ್ಟಾಟ = ಕಣ್ಕಟ್ಟು + ಆಟ,      
ಕಾಲ್ನಡಿಗೆ = ಕಾಲು + ನಡಿಗೆ,       
ಅತ್ಯುನ್ನತ = ಅತಿ + ಉನ್ನತ.  

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಚರ - ಸ್ಥಿರ,    
ಜ್ಞಾನ - ಅಜ್ಞಾನ,      
ಕೆಡಕು - ಒಳಿತು,     
ಸನ್ಮಾನ - ಅವಮಾನ.  

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

1. ಹೊಟ್ಟೆಪಾಡು : ಭಿಕ್ಷುಕರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಾರೆ.
2. ಆಪ್ತವಾಗು  : ನನಗೆ ಆಪ್ತವಾದ  ಸ್ನೇಹಿತರಿದ್ದಾರೆ.
3. ಅಪೂರ್ವ ಅನುಭವ : ನಾನು ಶಾಲಾ ಶೈಕ್ಷಣಿಕ ಪ್ರವಾಸ ಹೋದಾಗ  ಅಪೂರ್ವ ಅನುಭವ ಆಯಿತು.
4. ಜ್ಞಾನ ನಿಧಿ : ಸುಕ್ರಿ ಬೊಮ್ಮನಗೌಡರವರು ಅಪಾರ ಸಸ್ಯ ಜ್ಞಾನನಿಧಿ ಹೊಂದಿದ್ದರು.
5. ಪರಂಪರಾಗತ : ನಾವು ನಮ್ಮ ಮನೆಯಲ್ಲಿ ಆಚರಿಸುವ ಸಂಪ್ರದಾಯಗಳು ಪರಂಪರಾಗತವಾಗಿ ಬಂದಿವೆ.
5. ಆನೆಬಲ : ಭೀಮನಿಗೆ ಆನೆಯ ಬಲವಿತ್ತು.  

ಈ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
ಸಾಲೆ - ಶಾಲೆ,
ಜ್ಞಾನ - ಜಾನ,  
ಅಕ್ಷರ - ಅಕ್ಕರ,  
ಮುಖ - ಮೊಗ,  
ಪಕ್ಷಿ - ಹಕ್ಕಿ.

ಉ) ಕೆಳಗಿನ ಮಾದರಿಯಂತೆ ಹತ್ತು ಪದಗಳನ್ನು ಬರೆಯಿರಿ.
ಮಾದರಿ : ಹಾಡು + ಗಾರ = ಹಾಡುಗಾರ
1.  ನೃತ್ಯ  + ಗಾರ = ನೃತ್ಯಗಾರ             
2.  ಮೋಜು + ಗಾರ = ಮೋಜುಗಾರ          
3.  ಮಾಟ  + ಗಾರ = ಮಾಟಗಾರ            
8.  ಜೂಜು + ಗಾರ = ಜೂಜುಗಾರ  
5.  ಆಟ    + ಗಾರ = ಆಟಗಾರ             
6.  ಬಳೆ   + ಗಾರ = ಬಳೆಗಾರ
7.  ಸೊಗಸು + ಗಾರ = ಸೊಗಸುಗಾರ
4.  ಮೋಸ  + ಗಾರ = ಮೋಸಗಾರ           
9.  ಕನಸು  + ಗಾರ = ಕನಸುಗಾರ
10. ಮೀನು  + ಗಾರ = ಮೀನುಗಾರ

ಸೈದ್ಧಾಂತಿಕ ವ್ಯಾಕರಣ :

ನಾಮಪದದ ವಿಧಗಳು:  
1)ವಸ್ತುವಾಚಕ ಅಥವಾ ನಾಮವಾಚಕ: ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ, ಹಾಗೂ ಸ್ಥಳಗಳಿಗೆ ಇರುವ ಹೆಸರುಗಳು

ಎ) ರೂಢನಾಮ -- ಅನಾದಿಕಾಲದಿಂದ ರೂಢಿಯಾಗಿ ಬಂದಿರುವ ಸಾಮಾನ್ಯ ಹೆಸರುಗಳು ಉದಾ: ಹೆಂಗಸು, ಗಂಡಸು, ಹುಡುಗ, ಹುಡುಗಿ, ಮಕ್ಕಳು, ಜನರು, ನದಿ, ಬೆಟ್ಟ, ಸಮುದ್ರ, ಕೆರೆ, ಹಳ್ಳ, ಹಳ್ಳಿ,  ಗಿಡ,   ಮರ, ಹೊಳೆ, ಮುದುಕ, ಮುದುಕಿ, ಹೆಣ್ಣು ಎಲೆ, ಅಡಿಕೆ,  ಹಸು ಎಮ್ಮೆ ಬಳ್ಳಿ ಇತ್ಯಾದಿ

ಬಿ) ಅಂಕಿತನಾಮ -- ವ್ಯವಹಾರಕ್ಕಾಗಿ ಇಟ್ಟುಕೊಂಡಿರುವ ಹೆಸರುಗಳು
ಉದಾ: ಗಣೇಶ, ಕಾವೇರಿ, ಗಂಗಾ, ಬೆಂಗಳೂರು, ಧಾರವಾಡ, ಬೆಳಗಾವಿ, ಕರ್ನಾಟಕ  ಇತ್ಯಾದಿ

ಸಿ)  ಅನ್ವರ್ಥನಾಮ:  ವಸ್ತುವಿನ  ರೂಪ  ಹಾಗೂ  ವ್ಯಕ್ತಿಯ  ಗುಣಲಕ್ಷಣಗಳನ್ನು  ಆಧರಿಸಿ  ಅರ್ಥಕ್ಕೆ  ಅನುಸಾರ  ನೀಡುವ ಹೆಸರುಗಳು
ಉದಾ: ಜಾಣ, ಕವಿ, ಕುರುಡ, ಮೂಗ, ಕಿವುಡ, ದಡ್ಡ, ಸಾಧು, ಜಿಪುಣ, ಚಾಲಕ  ಇತ್ಯಾದಿ

2)ಗುಣವಾಚಕ: ಗುಣ ಸ್ವಭಾವಗಳನ್ನು ತಿಳಿಸುವುದು ಗುಣವಾಚಕ           
ಉದಾ: ವಿಶೇಷಣ - ವಿಶೇಷ್ಯ                  
ಸಿಹಿ  -  ಹಣ್ಣು                  
ದೊಡ್ಡ  - ನದಿ                  
ಒಳ್ಳೆಯ - ಹುಡುಗಿ

3)ಸಂಖ್ಯಾವಾಚಕ:  ಸಂಖ್ಯೆಯನ್ನು ಹೇಳುವುದು ಸಂಖ್ಯಾವಾಚಕ
ಉದಾ: ಎರಡು, ಮೂರು, ಐದು, ಹತ್ತು,ಸಾವಿರ, ಲಕ್ಷ, ಕೋಟಿ- ಇತ್ಯಾದಿ

4)ಸಂಖ್ಯೇಯವಾಚಕ: ಇಬ್ಬರು, ಎರಡನೆಯ, ಮೂವರು, ಮೂರನೆಯ, ಮೂರರಿಂದ,  ಐವರು, ಐದನೆಯ

5)ಭಾವನಾಮ :-
ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದ
ಉದಾ: ಬಿಳಿಯದರ ಭಾವ -ಬಿಳುಪು,        
ಕರಿಯದರ ಭಾವ -- ಕಪ್ಪು     
ಆಡುವುದರ ಭಾವ ಆಟ,          
ನೋಡುವುದರ ಭಾವ -ನೋಟ

6)ಪರಿಮಾಣ ವಾಚಕ :- ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ ಗಾತ್ರಗಳನ್ನು ಹೇಳುವುದು
ಉದಾ: ಪರಿಮಾಣ - ಹಲವು, ಕೆಲವು.
ಗಾತ್ರ - ಅಷ್ಟು, ಇಷ್ಟು.   
ಅಳತೆ - ಅಷ್ಟು, ಇಷ್ಟು.

7)ಪ್ರಕಾರ ವಾಚಕ :- ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದ
ಉದಾ: ಅಂಥ, ಅಂಥದು, ಅಂತಹುದು, ಇಂಥ, ಇಂಥದು, ಎಂತಹ, ಅಂಥವನು  ಇತ್ಯಾದಿ

8)ದಿಗ್ವಾಚಕಗಳು :- ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳು
ಉದಾ: ಮೂಡಣ, ಪಡುವಣ, ತೆಂಕಣ, ಬಡಗಣ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ, ಆಚೆ, ಈಚೆ.

9)ಸರ್ವನಾಮ :
ನಾಮ ಪದಗಳ ಬದಲಾಗಿ ಬಳಸುವ ಪದ
ಉದಾ: ಅವನು, ಅವಳು, ಅದು, ಇದು, ಅವರು, ಇವರು, ಇವುಗಳಿಂದ, ಅದಕ್ಕೆ  ಇತ್ಯಾದಿ  

ವಿಭಕ್ತಿ ಪ್ರತ್ಯಯಗಳು : ನಾಮ ಪ್ರಕೃತಿ ಅಥವಾ ಸರ್ವನಾಮಗಳನ್ನು ಬೇರೊಂದು ಪದದೊಡನೆ ಜೋಡಿಸುವಾಗ ಬಳಸುವ ಪ್ರತ್ಯಯಗಳು.
 

You Might Like

Post a Comment

0 Comments