Recent Posts

 ಕರಡಿ ಕುಣಿತ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಕರಡಿ ಕುಣಿತ

 
ಕೃತಿಕಾರರ ಪರಿಚಯ ; ದ.ರಾ. ಬೇಂದ್ರೆ :‘ ಅಂಬಿಕಾ ತನಯದತ್ತ ‘ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ.ಶ. 1896 ರಲ್ಲಿ ಧಾರವಾಡದ ಸಾಧನಕೇರಿಯಲ್ಲಿ ಜನಿಸಿದರು . ಇವರು ಪ್ರೌಢಶಾಲಾ ಅಧ್ಯಾಪಕರಾಗಿ , ಸೋಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ , ಧಾರವಾಡದ ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ . ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು ಗರಿ , ನಾಕುತಂತಿ , ನಾದಲೀಲೆ , ಮೇಘದೂತ , ಗಂಗಾವತರಣ , ಸಖೀಗೀತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರ ನಾಕುತಂತಿ ಕವನ ಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಲಭಿಸಿದೆ . ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ , ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ .
5ನೇ ತರಗತಿ ಕರಡಿ ಕುಣಿತ ಪದ್ಯ ನೋಟ್ಸ್
 
ಪದಗಳ ಅರ್ಥ
ಕುಣಿಕೋಲು = ಕುಣಿಸುವವನು ಹಿಡಿದುಕೊಳ್ಳುವ ಕೋಲು
ಕೈ ಕಡಗ = ಕೈಗೆ ಹಾಕಿಕೊಳ್ಳುವ ಬಳೆ
ಜಾಂಬವಂತ = ಕರಡಿ
ಧಣಿ = ಒಡೆಯ, ಯಜಮಾನ
ಅಂಜರಿಕೆ = ಹೆದರಿಕೆ, ಭಯ
ಛಂದಾನ = ಚೆನ್ನಾಗಿ
ಮನಷಾ = ಮನುಷ್ಯ
ಮಿಗಿಲಹುದು = ಹೆಚ್ಚಿನದು
ಮನಿಮುಂದ = ಮನೆಯ ಮುಂದೆ
 
ಅಭ್ಯಾಸ
 
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
 
೧. ಕರಡಿಯನ್ನು ಕುಣಿಸುವವನ ವೇಷಭೂಷಣ ಹೇಗಿತ್ತು?
 
೨. ಕರಡಿಯು ಕಾಡಿನಲ್ಲಿ ಏನುಂಡು ಬೆಳೆದಿದೆ?
 
೩. ಕರಡಿಯು ಏನು ಮಾಡಿದರೆ ಧಣಿಯು ದಾನವನ್ನುಕೊಡುತ್ತಾನೆ?
 
೪. ಕರಡಿಯು ಕೈಮುಗಿದು ಏನನ್ನು ಹಾರೈಸುತ್ತದೆ?
 
೫. ಕರಡಿಯ ಕುಣಿತಕ್ಕಿಂತ ಯಾರ ಬುದ್ಧಿಯ ಕುಣಿತ ಮಿಗಿಲಾದುದು?
 
ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
 
೧. ಕಬ್ಬಿಣ ಕೈಕಡಗ, ಕುಣಿಗೋಲು, ಕೂದಲು
ಕಂಬಳಿ ಹೊದ್ದಾಂವ ಬಂದಾನ!
ಗುಣುಗುಣುಗುಟ್ಟುತ ಕಡಗವ ಕಟ್ಟುತ
ಕರಡಿಯನಾಡಿಸುತ ನಿಂದಾನ!
 
೨. ಈ ಮನಷಾ ಎಂದೆಂದೊ ಕವಲಡತ್ತು ಕೋಡಗ
ತನಗಾಗಿ ಕುಣಿಸುತ್ತ ನಡದಾನ.
ಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.
 
ವ್ಯಾಕರಣ ಮಾಹಿತಿ
ಕನ್ನಡ ಸಂಧಿಗಳು
ಲೋಪಸಂಧಿ, ಆಗಮಸಂಧಿ, ಆದೇಶಸಂಧಿ.
 
ಅ) ಕನ್ನಡ ಸಂಧಿಗಳು
 
೧. ಮೇಲೆ + ಇಟ್ಟು = ಮೇಲಿಟ್ಟು
ಈ ಮೇಲಿನ ಸಂಧಿಕಾರ್ಯಗಳನ್ನು ಗಮನಿಸಿರಿ, ʼಮೇಲೆʼ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ʼಎʼ ಎಂಬುದು ಲೋಪವಾಗಿದೆ
 
೨. ಮುಳ್ಳು + ಅನ್ನು = ಮುಳ್ಳನ್ನು
ಇಲ್ಲಿ ಮುಳ್ಳು ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ʼಉʼ ಎಂಬುದು ಇಲ್ಲಿ ಲೋಪವಾಗಿದೆ, ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು ʼಲೋಪಸಂಧಿʼ ಎನ್ನುವರು.
ಇದರಂತೆ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ.
ಒಸರುತ್ತ + ಇದ್ದ = ಒಸರುತ್ತಿದ್ದ = ʼಅʼ ಸ್ವರ ಲೋಪವಾಗಿದೆ.
ಹುಡುಗರು + ಎಲ್ಲರು + ಹುಡುಗರೆಲ್ಲರು = ʼಉʼ ಸ್ವರ ಲೋಪವಾಗಿದೆ
ಮೇಲೆ + ಏರು = ಮೇಲೇರು = ʼಎʼ ಸ್ವರ ಲೋಪವಾಗಿದೆ.
 
ಆಗಮಸಂಧಿ
 
೧ ಹೊಲ + ಅನ್ನು = ಹೊಲವನ್ನು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಹೊಲವನ್ನು ಎಂಬ ಪದದಲ್ಲಿ ʼವʼ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.
 
೨. ಹೊಳೆ + ಅಲ್ಲಿ = ಹೊಳೆಯಲ್ಲಿ
ಇಲ್ಲಿ ʼಹೊಳೆಯಲ್ಲಿʼ ಎಂಬ ಪದದಲ್ಲಿ ʼಯʼ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.
ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮಸಂಧಿ ಎನ್ನುವರು.
ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ.
ಗಡಿಬಿಡಿ + ಇಂದ = ಗಡಿಬಿಡಿಯಿಂದ = ʼಯʼ ಆಗಮವಾಗಿದೆ.
ಆರಂಭ + ಆಗು = ಆರಂಭವಾಗು = ʼವʼ ಆಗಮವಾಗಿದೆ.
 
ಆದೇಶ ಸಂಧಿ
 
೧. ಕೋಪ + ಕೊಂಡು = ಕೋಪಗೊಂಡು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ.
ಕೋಪಗೊಂಡು ಎಂಬ ಪದದಲ್ಲಿ ಕ (ಕೊ) ಅಕ್ಷರದ ಬದಲಿಗೆ ಗ (ಗೊ) ಅಕ್ಷರ ಬಂದಿದೆ.
೨. ಮೈ + ತೊಳೆ = ಮೈದೊಳೆ
ಇಲ್ಲಿ ಮೈದೊಳೆ ಎಂಬ ಪದದಲ್ಲಿ ತ (ತೊ) ಅಕ್ಷರದ ಬದಲಿಗೆ ʼದʼ (ದೂ) ಅಕ್ಷರ ಬಂದಿದೆ.
ಹೀಗೆ ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬಂದರೆ ಅದನ್ನು ಆದೇಶಸಂಧಿ ಎನ್ನುವರು. ಇಲ್ಲಿ ಉತ್ತರಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ,ತ.ಪ ಗಳಿಗೆ ಗ,ದ.ಬ ಗಳು ಆದೇಶವಾಗಿ ಬರುತ್ತದೆ.
ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ:
ಕುಡು + ಕೋಲು = ಕುಡುಗೋಲು. ʼಕʼ ಬದಲು ʼಗʼ ಆಗಿದೆ
ಬೆಟ್ಟ + ತಾವರೆ = ಬೆಟ್ಟದಾವರೆ. ʼತʼ ಬದಲು ʼದʼ ಆಗಿದೆ
ಕಣ್ + ಪನಿ = ಕಂಬನಿ. ʼಪʼ ಬದಲು ʼಬʼ ಆಗಿದೆ
ಕನ್ನಡ ಪದಗಳು ಪರಸ್ಪರ ಸೇರಿ ಸಂಧಿಕಾರ್ಯ ನಡೆದಿದೆ, ಆದ್ದರಿಂದ ಇವುಗಳನ್ನು ʼಕನ್ನಡಸಂಧಿʼ ಎಂದು ಕರೆಯುತ್ತೇವೆ.
ಇದುವರೆಗೆ ನಾವು ಮೂರು ರೀತಿಯ ಸಂಧಿಕಾರ್ಯಗಳನ್ನು ಗಮನಿಸಿದ್ದೇವೆ.
 
ಭಾಷಾಭ್ಯಾಸ
 
ಅ) ಪದಗಳನ್ನು ಕೂಡಿಸಿ ಬರೆಯಿರಿ.
 
೧. ಮೇಲೆ + ಇಟ್ಟುಕೊಂಡು = ಮೇಲಿಟ್ಟುಕೊಂಡು
೨. ಶುಭ್ರ + ಆಯಿತು = ಶುಭ್ರವಾಯಿತು
೩. ಬಂಡೆ + ಅನ್ನು = ಬಂಡೆಯನ್ನು
ಆ) ಪದಗಳನ್ನು ಬಿಡಿಸಿ ಸಂಧಿಯ ಹೆಸರು ತಿಳಿಸಿರಿ
೧. ಸವಿಗನ್ನಡ
ಸವಿ + ಕನ್ನಡ = ಆದೇಶಸಂಧಿ
೨. ಮರವನ್ನು
ಮರ + ಅನ್ನು = ʼವʼ ಕಾರಾಗಮಸಂಧಿ
೩. ನಾವೆಲ್ಲಾ
ನಾವು + ಎಲ್ಲಾ = ಲೋಪಸಂಧಿ
೪. ದಾರಿಯಲ್ಲಿ
ದಾರಿ + ಅಲ್ಲಿ = ʼಯʼ ಕಾರಾಗಮಸಂಧಿ
೩. ಒಂದೊಂದು
ಒಂದು + ಒಂದು = ಲೋಪಸಂಧಿ
 
ಇ) ಶುಭನುಡಿ
 
೧. ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.
 
೨. ಪ್ರಾಣಿಗಳನ್ನು ಹಿಂಸಿಸಬಾರದು.
ಕರಡಿ ಕುಣಿತ ಪದ್ಯದ ಸಾರಾಂಶ |
 
ಪ್ರವೇಶ
” ಕರಡಿ ಕುಣಿತ ‘ ಕವನವು ಬೇಂದ್ರೆ ಅವರ ಸರಳ ಕವನಗಳಲ್ಲಿ ಒಂದು . ಈ ಕವನವನ್ನು ಓದುತ್ತ ಹೋದಂತೆ ಕವನದ ಒಡಲಿನಲ್ಲಿರುವ ಶೋಷಣೆಯ ಸಂಕೀರ್ಣತೆಯು ಅನುಭವ ವೇದ್ಯವಾಗುವುದು . ಈ ಕವನದ ಅಂತ್ಯದಲ್ಲಿ ಬೇಂದ್ರೆ ಅವರು ಮಾನವನ ಬುದ್ಧಿಯ ಕುಣಿತ ಎಲ್ಲ ಪ್ರಾಣಿಗಳ ಕುಣಿತಕ್ಕಿಂತ ಮಿಗಿಲಾದುದು ಎಂಬ ತತ್ತ್ವವನ್ನು ಸಾರುತ್ತಾರೆ .
 
ಮುಖ್ಯಾಂಶಗಳು
ದ.ರಾ. ಬೇಂದ್ರೆಯವರು ಕನ್ನಡದ ಹೆಸರಾಂತ ಜನಪ್ರಿಯ ಕವಿ . ಅವರ ಭಾಷೆ ಸೊಗಸು . ಈ ಪದ್ಯದಲ್ಲಿ ಹೆಸರೇ ಈ ಹೇಳುವಂತೆ ಕರಡಿಯ ಕುಣಿತವನ್ನು ವರ್ಣಿಸಿದ್ದರೂ , ಇದರ ಹಿಂದೆ ಇರುವ ನೀತಿ ಮುಖ್ಯವಾದದ್ದು . ಕರಡಿ ಕುಣಿಸುವವನು ತನ್ನ ಹೊಟ್ಟೆ ಪಾಡಿಗಾಗಿ , ಕಾಡಿನಿಂದ ಕರಡಿಯನ್ನು ಹಿಡಿದು ತಂದು , ತರಬೇತಿ ಕೊಟ್ಟು ಅದನ್ನು ಮಾಡುತ್ತಾನೆ . ಅವನು ತನ್ನ ಕೈಗೆ ಕಬ್ಬಿಣದ ಕಡಗ ಹಾಕಿಕೊಂಡು , ಕರಡಿಯನ್ನು ಕುಣಿಸುವುದಕ್ಕಾಗಿ ಒಂದು ಕುಣಿ ಕೋಲನ್ನು ತೆಗೆದುಕೊಂಡು , ಕಂಬಳಿಯನ್ನು ಹೊದ್ದುಕೊಂಡು , ಬಾಯಲ್ಲಿ ಗುಣಗುಟ್ಟುತ್ತಾ ಕಡಗವನ್ನು ಕುಟ್ಟುತ್ತಾ , ಕರಡಿಯನ್ನಾಡಿಸುತ್ತಾ ಮನೆಮನೆಗೆ ಹೋಗಿ ಭಿಕ್ಷೆ ಬೇಡುತ್ತಾನೆ . ಇವನು ಕುಣಿಸುವ ಕರಡಿ , ಪಾಪ ! ಯಾವ ಕಾಡಿನ ಅಡವಿಯಲ್ಲಿ ಜೇನನ್ನು ( ಜೇನುತುಪ್ಪವನ್ನು) ತಿಂದು ಬೆಳೆಯುತ್ತಿತ್ತೋ , ಆದರೆ ಇವನು ಅದನ್ನು ಹಿಡಿದು ತಂದು , ತಾನು ಹೇಳುವಂತೆ ಮಾಡಲು ಕಲಿಸಿ ಕೊಟ್ಟಿದ್ದಾನೆ . ಆದ್ದರಿಂದ ಅದು ಅವನು ಹೇಳಿದಂತೆ ಅವನ ಕೈಗೊಂಬೆಯಾಗಿ ಕುಣಿಯುತ್ತದೆ . ಧಣಿ ( ಒಡೆಯರ ) ಯರ ಮನೆ ಮುಂದೆ ಕಾವಲು ಮಾಡು , ಅವರು ನಿನಗೆ ದಾನ ಕೊಡುತ್ತಾರೆ ಎಂದು ದಾನಿಗಳನ್ನು ಹೊಗಳುತ್ತಾನೆ . ಆತನು ಕರಡಿಯ ವಿಶೇಷತೆಯ ಬಗ್ಗೆ ಈ ರೀತಿ ಹೇಳುತ್ತಾನೆ . ಈ ಕರಡಿಯು ತ್ರೇತಾಯುಗದಲ್ಲಿ ಶ್ರೀರಾಮನನ್ನು , ದ್ವಾಪರಯುಗದಲ್ಲಿ ಕೃಷ್ಣನನ್ನು ಈ ಕಲಿಯುಗದಲ್ಲಿ ಕಲ್ಕಿಯನ್ನು ನೋಡಿದ್ದಾನೆ . ಜಾಂಬುನದಿಯ ದಂಡೆಯ ಜಂಬುನೇರಳೆ ಹಣ್ಣನ್ನು ಈ ಕೃತಯುಗದ ಕೊನೆಯಲ್ಲಿ ತಿಂದಿದ್ದಾನೆ ಎನ್ನುತ್ತಾನೆ . ತಾಯಿಯರೇ , ಬನ್ನಿ , ನಿಮ್ಮ ಕಂದಮ್ಮಗಳನ್ನು ಕರೆದುಕೊಂಡು ಬನ್ನಿ . ಅವರಿಗೆ ಅಂಜಿಕೆ ( ಹೆದರಿಕೆ ) ಯಾಗಿದ್ದರೆ , ಅದನ್ನು ನಾಶಪಡಿಸುತ್ತೇನೆ . ಈ ಕರಡಿಯ ಒಂದು ರೋಮವನ್ನು ನಿಮ್ಮ ಮಗುವಿನ ಕೊರಳಲ್ಲಿ ಕಟ್ಟಿರಿ , ಆ ಮಗುವಿಗೆ ಭೀಮಬಲ ಬಂದು ರಕ್ಷಿಸುತ್ತದೆ . ಈ ಕರಡಿಯು ‘ ಕುಣಿ ” ಎಂದು ಹೇಳುವುದೇ ತಡ , ತನನ , ತಾನನ , ತಂದಾನ ಎಂದು ಕುಣಿಯುತ್ತಾ , ಮುದ್ದು ಕೂಸಿನ ತರಹ ಮುಸುಮುಸು ಮಾಡುತ್ತಾ ಚೆನ್ನಾಗಿ ಕುಣಿಯುತ್ತದೆ . ಹೊಟ್ಟೆಗಿಲ್ಲದ ನಮ್ಮಂತಹವರಿಗೆ ಹೊಟ್ಟೆಗೆ ಹಾಕಲು ಇವನು ಕುಣಿಯುತ್ತಾನೆ . ಯಾರು ಇದನ್ನು ಕುಣಿಯುವಂತೆ ಮಾಡಿ ದಾನ ಮಾಡುತ್ತಾರೋ ಅದರ ಹೊಟ್ಟೆ ತಣ್ಣಗಿರಲಿ ಎಂದು ಹರಸುತ್ತಾ ಕಡೆ ಕೈಮುಗಿದು ಬೇಡಿಕೊಳ್ಳುತ್ತಾನೆ . ಮನಸ್ಸಿರುವ ಮಾನವ ತನ್ನ ಹೊಟ್ಟೆಯ ಪಾಡಿಗಾಗಿ ಇಂತಹ ಪ್ರಾಣಿಯನ್ನು ಕುಣಿಸಿ , ತನ್ನ ಚರಿತಾರ್ಥ (ಹೊಟ್ಟೆಯನ್ನು ತುಂಬಿಸಿಕೊಳ್ಳುವ ಕಾಠ್ಯವನ್ನು ನಡೆಸುತ್ತಾನೆ . ಅದೇ ಪರಮಾರ್ಥಎಂಬಂತೆ ಬದುಕುತ್ತಾನೆ, ಈ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಂದಿನಿಂದಲೋ ಇಂತಹ ಪ್ರಾಣಿಯನ್ನು ಕುಣಿಸುವ ಕಾಯಕ ಮಾಡುತ್ತಿದ್ದಾನೆ . ಇದನ್ನು ನೋಡಿದ ಕವಿ ಹೀಗೆ ಹೇಳುತ್ತಾರೆ . ಈ ಕರಡಿಯ ಕುಣಿತಕ್ಕಿಂತ ನರರ ಬುದ್ಧಿಯ ( ಮನುಷ್ಯನ ಸ್ವಾರ್ಥತೆಯ ) ಕುಣಿತ ಹೆಚ್ಚಿನದು ಎಂದು ಉದ್ಗರಿಸಿದ್ದಾರೆ . ಇನ್ನಾದರೂ ಮಾನವರು ತಮ್ಮ ಸ್ವಾರ್ಥಕ್ಕಾಗಿ ಇಂತಹ ಪ್ರಾಣಿಗಳ ಸ್ವತಂತ್ರವನ್ನು ಕಸಿಯುವ ತಪ್ಪು ಮಾಡದಿರಲಿ ಎಂಬುದು ಈ ಆಶಯ .



You Might Like

Post a Comment

0 Comments