Recent Posts

ನೀರು ಕೊಡದ ನಾಡಿನಲ್ಲಿ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 
 ಅಧ್ಯಾಯ-೨
 
ನೀರು ಕೊಡದ ನಾಡಿನಲ್ಲಿ

ಕೃತಿಕಾರರ ಪರಿಚಯ
 
 ಶ್ರೀಮತಿ ನೇಮಿಚಂದ್ರಅವರು ಜುಲೈ 16 1959  ರಂದು ಚಿತ್ರದುರ್ಗದಲ್ಲಿ ಜಿಲ್ಲೆ   ಗುಂಡಪ್ಪ ಮತ್ತು ತಿಮ್ಮಕ್ಕನವರ ದಂಪತಿಗಳ ಮಗಳಾಗಿ ಜನಿಸಿದರು. ಕನ್ನಡದಲ್ಲಿ ಚಿಂತನ ಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಯಾದ್ ವಶೇಮ್ – ಕಾದಂಬರಿ, ನಮ್ಮ ಕನಸುಗಳಲ್ಲಿನೀವಿದ್ದೀರಿ, ಮತ್ತೇ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು. ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ – ಪ್ರವಾಸ ಕಥನಗಳು. ಬದುಕು ಬದಲಿಸಬಹುದು ಅಂಕಣ ಬರಹಗಳು, ಇತ್ಯಾದಿ ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ‘ಕರ್ನಾಟಕ ಸಾಹಿತ್ಯಪ್ರಶಸ್ತಿ’ ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ‘ನೀರು ಕೊಡದ ನಾಡಿನಲ್ಲಿ’ ಅಂಕಣ ಬರೆಹವನ್ನು ಶ್ರೀಮತಿ ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’
ಕೃತಿಯಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ.

ಆಶಯ ಭಾವ
ವಿಶ್ವದ ಜಾಗತೀಕರಣದ ಹೊಡೆತಕ್ಕೆ ಸಿಲುಕಿದ ನಮ್ಮ ನಗರಗಳಿಂದು ಕೊಳ್ಳುಬಾಕತನವನ್ನು, ಲಾಭಕೋರತನವನ್ನುಹುಟ್ಟುಹಾಕಿ ವಿಶ್ವದ ಮಾರುಕಟ್ಟೆಯಾಗಲು ಹೊರಟಿರುವುದು ಬಲು ಅಪಾಯಕಾರಿ ಎಂಬ ವೈಚಾರಿಕ ಚಿಂತನೆಯನ್ನುಹಾಗೂ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯನ್ನು “ನೀರು ಕೊಡದ ನಾಡಿನಲ್ಲಿ” ಈ ಗದ್ಯಭಾಗದಲ್ಲಿ ಅತ್ಯುತ್ತಮವಾಗಿ ಚಿತ್ರಿಸಿದೆ

ಪದಗಳ ಅರ್ಥ
ಅಗ್ಗ – ಕಡಿಮೆ                                  
 ಬೆಲೆ; ಅಲೆ – ಸುತ್ತಾಡು;
 ಅಸ್ತ್ರ  – ಆಯುಧ;                                     
 ಜನಪ್ರಿಯ – ಪ್ರಸಿದ್ಧ, ಖ್ಯಾತಿಪಡೆದ;
ಮಣ – ಹೆಚ್ಚು ತೂಕವಾದ;                    
 ಮರುಳು – ಹುಚ್ಚುತನ;
ಮಾಲೀಕ – ಯಜಮಾನ;                         
 ಹರಡು – ಪಸರಿಸು,ಕೆದರು;
ಹಿಂಜರಿಕೆ – ಹಿಂದೆ ಸರಿ,                   
ಕೀಳರಿಮೆ; ಹುನ್ನಾರ – ಸಂಚು;
ಹೊಕ್ಕು – ಒಳಗೆ ಹೋಗು.

ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?
2. ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
3. ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
4. ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ?
5. ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
6. ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು? 
ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
2. ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು?
3. ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
4. ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು? 
5. ಜನಪ್ರಿಯ ಹೋಟಲಿನ ಮಾಲೀಕನಿಗೆ ತಂಪುಪಾನೀಯ ಕಂಪನಿ ಹೇಳಿದ್ದೇನು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ. 
1.  ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
 2.  ಕಂಪನಿಗಳು  ಅಪ್ಪಟ  ಅಗತ್ಯದ  ವಸ್ತುಗಳನ್ನು  ಇವಿಲ್ಲದೆ  ಬದುಕಿಲ್ಲ      
ಎಂಬಂತೆ ಹೇಗೆ ಬಿಂಬಿಸುತ್ತಿವೆ?  
3.  ಲೇಖಕಿಗೆ  ಬೆಂಗಳೂರಿನಲ್ಲಿ  ನೀರು  ಕೊಡದ  ಸಂಸ್ಕೃತಿಯ ಬಗ್ಗೆ  ಆದ ಅನುಭವವನ್ನು ಬರೆಯಿರಿ.

ಈ. ಖಾಲಿಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.
1. ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು __________
2. ಈ ದೇಶಗಳಲ್ಲಿ ಮನೆಯ _______ ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ. 
3. ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ_________ ಗಳೆಂದು ಸರ್ವರಿಗೂ ವೇದ್ಯವಾಗಿದೆ. 
4. ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ___________ ನೀಡುತ್ತಾರೆ.

ಸೈದ್ಧಾಂತಿಕ ಭಾಷಾಭ್ಯಾಸ

ಗುಣಿತಾಕ್ಷರ ಪರಿಚಯಾತ್ಮಕ ವಿವರ
ದ್ ವ್ ರ್ ವ್ಯಂಜನಾಕ್ಷರಗಳನ್ನು ಸೇರಿಸಿ ಬರೆದರೆ ಪದ ರಚನೆಯಾಗುವುದಿಲ್ಲ.ಅದರ ಬದಲಿಗೆ ದ್ + ಏ = ದೇ, ವ್ + ಅ = ವ, ರ್ + ಉ = ರು ಈ ರೀತಿ ಸ್ವರಾಕ್ಷರಗಳನ್ನು ಸೇರಿಸಿ ಬರೆದರೆ  ಅರ್ಥಪೂರ್ಣವಾದ    ದೇವರು  ಎಂಬ  ಪದ  ರಚನೆ  ಆಗುತ್ತದೆ.  ಹೀಗೆ
 ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ. ಒಂದು ವ್ಯಂಜನಕ್ಕೆ ಅ ದಿಂದ ಔ  ವರೆಗಿನ  13  ಸ್ವರಗಳು  ಸೇರಿದರೆ  13  ಗುಣಿತಾಕ್ಷರಗಳಾಗುತ್ತವೆ.  34  ವ್ಯಂಜನಗಳಿಗೆ ತಲಾ 13 ಸ್ವರಾಕ್ಷರಗಳನ್ನು ಸೇರಿಸುವುದರಿಂದ 442 ಗುಣಿತಾಕ್ಷರಗಳನ್ನು ರಚಿಸಬಹುದು. ಈ  ಗುಣಿತಾಕ್ಷರಗಳೇ  ಕಾಗುಣಿತ  ಅಕ್ಷರಗಳು.  ಅದೇ  ರೀತಿ  ಯೋಗವಾಹಗಳನ್ನು  ಸೇರಿಸಿ ಗುಣಿತಾಕ್ಷರಗಳನ್ನು ಮಾಡಬಹುದು.

ಸಂಯುಕ್ತಾಕ್ಷರ 
ಅಪ್ಪ  ಅಮ್ಮ  ಅಕ್ಷರ  ಅಸ್ತ್ರ ಮುಂತಾದ ಪದಗಳನ್ನು ಬಳಸುತ್ತೇವೆ. ಅಪ್ಪ ಪದದಲ್ಲಿ ಅ ಪ್  ಪ್  ಅ  ಎಂಬ ನಾಲ್ಕು ಅಕ್ಷರಗಳಿವೆ. ಮೇಲ್ನೋಟಕ್ಕೆ ಎರಡೇ ಅಕ್ಷರಗಳು ಕಾಣುತ್ತವೆ. ಮೊದಲ ಅಕ್ಷರ ಸ್ವರಾಕ್ಷರ. ಎರಡನೆಯ ಅಕ್ಷರದಲ್ಲಿ ಪ್  ಪ್  ಅ ಎಂಬ ಮೂರು ಅಕ್ಷರಗಳಿವೆ. ಅವುಗಳಲ್ಲಿ ಎರಡು ವ್ಯಂಜನಗಳು ಮತ್ತು ಒಂದು ಸ್ವರಾಕ್ಷರ. ಅದೇ ರೀತಿ ಅಸ್ತ್ರ ಪದದಲ್ಲಿ ಅ  ಸ್  ತ್  ರ್  ಅ ಎಂಬ ಐದು ಅಕ್ಷರಗಳಿವೆ.ಈ ಪದದ ಎರಡನೆಯ ಅಕ್ಷರ ಸ್ತ್ರ ದಲ್ಲಿ ಮೂರು ವ್ಯಂಜನ ಮತ್ತು ಒಂದು ಸ್ವರಾಕ್ಷರವಿದೆ. ಹೀಗೆ - ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ  ಒಂದು  ಸ್ವರ  ಸೇರಿ  ಆಗುವ  ಅಕ್ಷರವೇ  ಸಂಯುಕ್ತಾಕ್ಷರ.  ಇದನ್ನು  ದ್ವಿತ್ವಾಕ್ಷರ/ ಒತ್ತಕ್ಷರ ಎಂತಲೂ ಕರೆಯುವರು. ಸಂಯುಕ್ತಾಕ್ಷರದಲ್ಲಿ ಸಜಾತೀಯ ಹಾಗೂ ವಿಜಾತೀಯ ಎಂಬೆರಡು ವಿಧಗಳಿವೆ.

ಸಜಾತೀಯ ಸಂಯುಕ್ತಾಕ್ಷರ
ಅಪ್ಪ,  ಅಮ್ಮ,  ಲೆಕ್ಕ,  ಕಗ್ಗ  ಪದಗಳನ್ನು  ಗಮನಿಸಿದಾಗ  ಇಲ್ಲಿರುವ  ಪ್ರತಿಯೊಂದು ಸಂಯುಕ್ತಾಕ್ಷರದಲ್ಲೂ  ಆಯಾ  ಜಾತಿಯ  ಎರಡೆರಡು  ವ್ಯಂಜನಗಳಿವೆ. ಹೀಗೆ  -  ಒಂದೇ ಜಾತಿಯ  ಎರಡು  ವ್ಯಂಜನಗಳು  ಒಟ್ಟಿಗೆ  ಸೇರಿ  ಆಗುವ  ಸಂಯುಕ್ತಾಕ್ಷರವೇ  ಸಜಾತೀಯ ಸಂಯುಕ್ತಾಕ್ಷರ.

ವಿಜಾತೀಯ ಸಂಯುಕ್ತಾಕ್ಷರ
ಅಷ್ಟ,  ಆರ್ಯ,  ಅಸ್ತ್ರ  ಪದಗಳಲ್ಲಿರುವ  ಪ್ರತಿಯೊಂದು  ಸಂಯುಕ್ತಾಕ್ಷರದಲ್ಲೂ  ಬೇರೆ ಬೇರೆ ಜಾತಿಯ ವ್ಯಂಜನಗಳಿವೆ. ಹೀಗೆ - ಬೇರೆ ಬೇರೆ ಜಾತಿಯ ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ವಿಜಾತೀಯ ಸಂಯುಕ್ತಾಕ್ಷರ. 

ಪದಗಳು
ಯಾವುದೇ ಭಾಷೆಯಾಗಲಿ ಅದು ತನ್ನ ಸುತ್ತಮುತ್ತಣ ಭಾಷೆಗಳ ಸಂಪರ್ಕದಿಂದಾಗಿ ಬೇರೆ ಭಾಷೆಗಳ ಪದಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಬೆಳೆಯುತ್ತದೆ. ಇದು ಭಾಷಿಕ ಸಹಜ ಕ್ರಿಯೆ. ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು. ಈ ವಾಕ್ಯ ಕನ್ನಡ ಭಾಷೆಯ ವಾಕ್ಯವಾದರೂ ಇಲ್ಲಿರುವ ಎಲ್ಲಾ ಪದಗಳು ಕನ್ನಡದವುಗಳಲ್ಲ.
 ಮೋಟಾರು  ಪದ  ಆಂಗ್ಲ  ಭಾಷೆಯಿಂದಲೂ  ಜಬರ್ದಸ್ತ್ತ್  ಪದ  ಹಿಂದಿ  ಭಾಷೆಯಿಂದಲೂ ಜೀವನ, ಮುಖ್ಯ ಪದಗಳು ಸಂಸ್ಕೃತದಿಂದಲೂ  ಬಂದ  ಪದಗಳಾಗಿದ್ದು  ಉಳಿದವು  ಕನ್ನಡ ಪದಗಳು.ಹೀಗಾಗಿ ಕನ್ನಡ ಭಾಷೆಯಲ್ಲಿ ಕನ್ನಡದ ಪದಗಳಲ್ಲದೆ ಬೇರೆ ಭಾಷೆಗಳಿಂದ ಬಂದ ಪದಗಳೂ ಇವೆ. 
ದೇಶ್ಯ ಪದ: ಆಯಾ ಭಾಷೆಯ ಮೂಲ (ಸ್ವಂತ) ಪದಗಳೇ ದೇಶ್ಯ ಪದಗಳು. ಸಂಖ್ಯಾಪದಗಳು  (ಒಂದರಿಂದ  ಒಂಬೈನೂರ  ತೊಂಬತ್ತೊಂಬತ್ತರವರೆಗೆ), ದೇಹದ ಅಂಗಗಳ  ಹೆಸರು(ಕೈ,  ಕಾಲು,  ಬಾಯಿ  ಇತ್ಯಾದಿ),  ವಿಭಕ್ತಿ  ಪ್ರತ್ಯಯಗಳು,  ಬಂಧುವಾಚಕಪದಗಳು (ಅಜ್ಜ,  ಅಜ್ಜಿ,  ಅಪ್ಪ,  ಅಮ್ಮ, ಚಿಕ್ಕಪ್ಪ, ಅಣ್ಣ ಇತ್ಯಾದಿ), ಮುಂತಾದ ನಿರ್ದಿಷ್ಟಪದಗಳು, ಪ್ರತಿಯೊಂದು ಭಾಷೆಯಲ್ಲೂ ಆಯಾ ಭಾಷೆಗಳ ಸ್ವಂತ ಪದಗಳಾಗಿರುತ್ತವೆ.

ಅನ್ಯದೇಶ್ಯ ಪದ : ಬೇರೆ ಭಾಷೆಯಿಂದ ಬಂದಿರುವ ಪದಗಳೇ 
ಅನ್ಯದೇಶ್ಯ ಪದಗಳು.ಕನ್ನಡದಲ್ಲಿ  ಬಳಕೆಯಾಗುತ್ತಿರುವ  ಅರ್ಜಿ,    ಕಚೇರಿ,    ಕಾಖಾರ್ನೆ,  ಮುಂತಾದವು ಹಿಂದುಸ್ತಾನೀ ಭಾಷೆಯ ಪದಗಳು. ಕೋರ್ಟ್,  ಬ್ಯಾಂಕು,  ಹಾರ್ಮೋನಿಯಂ,  ಹೋಟೆಲು ಮುಂತಾದವು  ಆಂಗ್ಲಭಾಷೆಯಿಂದ  ಬಂದ  ಪದಗಳು.  ಅಲಮಾರು,    ಸಾಬೂನು,    ಮೇಜು ಮುಂತಾದವು  ಪೋರ್ಚುಗೀಸ್  ಭಾಷೆಯಿಂದ  ಬಂದ  ಪದಗಳು.  ಹೀಗೆ  ಕನ್ನಡ  ಭಾಷೆಗೆ ಅನ್ಯಭಾಷಾ ಪದಗಳು ಬಂದಾಗ ಅವು ಕನ್ನಡದ ಜಾಯಮಾನಕ್ಕೆ ತಕ್ಕಂತೆಬದಲಾವಣೆಗೊಂಡು ಬಳಕೆಯಾಗುತ್ತವೆ. ಮಾಲೆ,  ರಾಜ,  ವಿಪತ್ತು,  ದೇವತೆ ಮುಂತಾದ ಪದಗಳು ಸಂಸ್ಕೃತ ಭಾಷೆಯಿಂದ  ಬಂದಿವೆ.  ಇವನ್ನು  ಅನ್ಯದೇಶ್ಯ  ಪದಗಳೆಂದು  ಕರೆಯುವ  ವಾಡಿಕೆ  ಇಲ್ಲ. ಇವುಗಳನ್ನು ತತ್ಸಮ ಎಂದು ಕರೆಯುವರು. ಕ

ತತ್ಸಮ-  ತದ್ಭವಸಂಸ್ಕೃತ  ಮತ್ತು  ಪ್ರಾಕೃತ  ಭಾಷೆಗಳಿಂದ  ಕನ್ನಡಕ್ಕೆ  ಪದಗಳನ್ನು  ಪಡೆದುಕೊಳ್ಳುವಾಗ ಅಲ್ಪಸ್ವಲ್ಪ ಬದಲಾವಣೆಗೆ ಒಳಪಟ್ಟ ಹಾಗೂ ಬಹಳಷ್ಟು ಬದಲಾವಣೆಗೆ ಒಳಪಟ್ಟ ಪದಗಳು ಇವೆ. 

ತತ್ಸಮ: ತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನ ಎಂದರ್ಥ. ಹಾಗಾಗಿ ತತ್ಸಮಎಂದರೆ ಸಂಸ್ಕೃತಕ್ಕೆ ಸಮಾನವಾದುದು ಎಂದರ್ಥ.  ಸಂಸ್ಕೃತದಿಂದ  ಕನ್ನಡಕ್ಕೆ  ಬರುವಾಗ  ಯಾವುದೇ  ಬದಲಾವಣೆ  ಹೊಂದದೆ  ಹಾಗೆಯೇ ಬಂದು ಸೇರಿದ ಪದಗಳೂ ಇವೆ. ಉದಾ: ರಾಮ, ಭೀಮ,  ವಸಂತ,  ಸೋಮ,  ಚಂದ್ರ, ಕರ್ತೃ,    ಸ್ತ್ರೀ  ಇತ್ಯಾದಿ  ಪದಗಳು.  ಮಾಲೆ,  ಶಾಲೆ,  ಆಶೆ,  ನಿದ್ರೆ  ಇತ್ಯಾದಿ  ಆ  ಪದಗಳು ಎ ಕಾರಾಂತವಾಗಿ ಬದಲಾವಣೆಗೊಂಡ ಪದಗಳೂ ಇವೆ. ಇಂತಹ ಪದಗಳನ್ನು ತತ್ಸಮಗಳೆಂದು ಕರೆಯಲಾಗುತ್ತದೆ. ಕಾರಾಂತ

ತದ್ಭವ: ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣ ಬದಲಾವಣೆ ಹೊಂದಿರುವ ಪದಗಳೇ ತದ್ಭವಗಳು (ತತ್ ಎಂದರೆ ಅದರಿಂದ ಅಂದರೆ ಸಂಸ್ಕೃತದಿಂದ , ಭವ  ಎಂದರೆ  ಹುಟ್ಟಿದ    ಅಂದರೆ  ಸಂಸ್ಕೃತದಿಂದ  ಹುಟ್ಟಿದ,  ಎಂದರ್ಥ.)  ಸಿರಿ,  ಬಾವಿ, ದನಿ,  ಆಸೆ  ಮುಂತಾದ  ಪದಗಳು  ಅಲ್ಪಸ್ವಲ್ಪ  ಬದಲಾವಣೆ  ಹೊಂದಿದ  ಪದಗಳು.  ಬಸದಿ, ಬೇಸಗೆ, ಕೊಡಲಿ, ಬಸವ, ಬಿನ್ನಣ, ಮುಂತಾದ ಪದಗಳು ಪೂರ್ಣ ಬದಲಾವಣೆ ಹೊಂದಿದ ಪದಗಳು.

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 
1.  ಗುಣಿತಾಕ್ಷರ ಎಂದರೇನು?
 2.  ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ. 
3.  ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ. 
4.  ಕನ್ನಡದಲ್ಲಿರುವ ಯಾವುದಾದರು ಐದು ತದ್ಭವ ಪದಗಳನ್ನು ಪಟ್ಟಿ ಮಾಡಿ. 

ಆ. ಪ್ರಾಯೋಗಿಕ ಭಾಷಾಭ್ಯಾಸ  

1.  ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
 ಹೋಟೆಲ್ ,  ಮಾಲೀಕ,  ರಸ್ತೆ  , ಗ್ರಾಹಕ , ಗಾಂಧೀಜಿ  ,ಇವರು  ಪುಣ್ಯಾತ್ಮ 

2.  ಕೊಟ್ಟಿರುವ  ಪದಗಳಲ್ಲಿರುವ  ಸಜಾತೀಯ  ಮತ್ತು  ವಿಜಾತೀಯ  ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.   
ದಿನಪತ್ರಿಕೆ  ಅಗತ್ಯಅಮ್ಮ ವಸ್ತು  ಪುಕ್ಕಟ್ಟೆ  ಹಣ್ಣಿನರಸ  ನಿಲ್ದಾಣ  ಮಣ್ಣು     ಸಂಪ್ರದಾಯ    ಶುದ್ಧ     ಅಗ್ಗ        ಸಂಸ್ಕೃತಿ      ಪ್ರವಾಸ    ಶಕ್ತಿ  ಹುನ್ನಾರ  

3.  ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ 
ವರ್ಷ  , ಪ್ರಾಣ  , ಶಕ್ತಿ ,  ಪುಣ್ಯ

4.  ಕೊಟ್ಟಿರುವ  ಪದಗಳಲ್ಲಿರುವ  ದೇಶೀಯ  ಮತ್ತು  ಅನ್ಯದೇಶೀಯ  ಪದಗಳನ್ನು  ಆರಿಸಿ ಬರೆಯಿರಿ 
ದೊಡ್ಡದು ,  ಬಸ್ಸು ,  ಬರ್ಗರ್  , ಪಾನಕ ,  ವಾಟರ್ ,  ಸಣ್ಣ ,  ಹುನ್ನಾರ  

ಪೂರಕ ಓದು

ಗೊರೂರು ರಾಮಸ್ವಾಮಿ ಅಯ್ಯಂಗಾರರ ಅಮೇರಿಕಾದಲ್ಲಿ ಗೊರೂರು ಪುಸ್ತಕವನ್ನು ಓದಿರಿ.
 ನೇಮಿಚಂದ್ರ ಅವರ ಬದುಕು ಬದಲಿಸಬಹುದು ಕೃತಿಯನ್ನು ಓದಿರಿ. 

ಪಾಠದ ಸಾರಾಂಶ
ಲೇಖಕಿ ಶ್ರೀಮತಿ ನೇಮಿಚಂದ್ರ ಅವರ ಅಂಕಣ ಬರಹವಾದ ‘ಬದುಕು ಬದಲಿಸಬಹುದು’ ಕೃತಿಯಿಂದ ಆಯ್ದ‘ನೀರು ಕೊಡದ ನಾಡಿನಲ್ಲಿ’ ಪಾಠವು ಆಧುನಿಕ ಜೀವನ ಶೈಲಿಗೆ ಹಿಡಿದ ಕೈ ಕನ್ನಡಿಯಾಗಿದೆ ಲೇಖಕಿಯರು ‘ದೇಶ ಸುತ್ತು ಕೋಶ ಓದು’ ಎಂಬ ಗಾದೆಯಂತೆ ಹಲವಾರು ದೇಶಗಳನ್ನು ಸುತ್ತಿದ ಅನುಭವದಿಂದ ಭಾರತದಿಂದ ಹೊರಗೆ ಕಾಲಿಟ್ಟರೇ ಉಳಿದೆಲ್ಲವೂ ನೀರು ಕೊಡದ ನಾಡುಗಳು ಎಂದಿದ್ದಾರೆ. ಯುರೋಪ್ನಲ್ಲಿ ಎರಡು ವಾರ ಕಳೆದಿದ್ದಾರೆ. ಊರೂರು ಸುತ್ತಿದ್ದಾರೆ. ಇಲ್ಲಿ ಬಾಯಾರಿಕೆಯಾದಾಗ ಕುಡಿಯಲು  ನೀರು ಸಿಗುವುದಿಲ್ಲ ಆದರ ಬದಲಿಗೆ  ಕೋಲಾಗಳು, ಫ್ರೆಂಚ್ ವೈನ್, ಬಿಯರ್, ಬಾಟಲಿಯಲ್ಲಿ ಹಣ್ಣಿನ ರಸ ಧಾರಾಳವಾಗಿ ದೊರೆಯುತ್ತವೆ.ಯುರೋಪಿನಲ್ಲಾಗಲಿ, ಅಮೇರಿಕದಲ್ಲಾಗಲಿ ನೀರು ಕೊಡುವ ಸಂಪ್ರದಾಯವಿಲ್ಲ. ಇಲ್ಲಿ ನೀರು ಎಲ್ಲೆಂದರಲ್ಲಿ ಪುಕ್ಕಟೆಯಾಗಿ ಸಿಗುವುದಿಲ್ಲ. ನಮ್ಮ ನಾಡಿನಲ್ಲಿ ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ದುಡ್ಡಿಲ್ಲದೆ ಕುಡಿಯಬಲ ನೀರುನ್ನು ಇರಿಸುತ್ತಾರೆ. ಆದರೆ ಇಲ್ಲಿ ಸಾಧ್ಯವಿಲ್ಲ. ನಮ್ಮಲ್ಲಿ ಹೋಟೆಲ್ಗೆ ಹೋಗಿ ನೀರು ಮಾತ್ರ ಕುಡಿದು ಬರಬಹುದು. ಆದರೆ ಇದು ವಿದೇಶಗಳಲ್ಲಿ ಸಾಧ್ಯವಿಲ್ಲ. ಲೇಖಕಿಯವರುವರು ವಿದೇಶಕ್ಕೆ ಹೋಗಲು ದೆಹಲಿಗೆ ಬಂದಿರುತ್ತಾರೆ. ಅಲ್ಲಿ ದೊಡ್ಡ ದೊಡ್ಡ ಮಡಕೆಗಳಲ್ಲಿ ತುಂಬಿಸಿರುವುದನ್ನು ಗುರುದ್ವಾರಗಳ  ಬಳಿ ಸ್ವಯಂ ಸೇವಕರು ಆಟೋ, ಬಸ್ಸು, ಹಾಗೂ ದಾರಿಯಲ್ಲಿ ಹೋಗುವವರಿಗೆಲ್ಲ ಉಚಿತವಾಗಿ ನೀರು ಕೊಡುವುದನ್ನು ನೋಡಿ, ರೋತಕ್   ರಸ್ತೆಯ ಅವರ ಅತ್ತೆಯ ಮನೆಗೆ ಬಂದರು. ಅವರ ಅತ್ತೆ ಮೊಮ್ಮಗನಿಗೆ ಕುಡಿಯಲು ನೀರು ತರಲು ಹೇಳಿದರು. ಆ ಪುಟ್ಟ ಹುಡುಗ ನೀರು ತಂದು ಕೊಟ್ಟನು. ಮನೆಗೆ ಬಂದವರಿಗೆ ಮೊದಲು ನೀರು ಕೊಟ್ಟು ಉಪಚರಿಸುವ ಗುಣ, ಸಂಸ್ಕಾರ ನಮ್ಮ ನಾಡಿನಲ್ಲಿ ಇದೆ. ಇಲ್ಲಿಂದಲೇ ಲೇಖಕಿಯು  ನೀರು ಕೊಡದ ನಾಡಿಗೆ ಹಾರಿದರು. ‘ಮ್ಯಾಗ್ಡೊನಾಲ್ಡ್’ ನಂತಹ ಅಗ್ಗದ ಫಾಸ್ಟ್ಪುಡ್ ಜಾಯಿಂಟ್ಸ್ಗೆ ಹೋಗಿ, ವೈಭವದ ಪಂಚತಾರಾ ಹೋಟೇಲುಗಳಿಗೇ ಹೋಗಿ, ನೀರು ಇಡುವ ಅಥವಾ ಕೊಡುವ ಸಂಪ್ರದಾಯವೇ ಇಲ್ಲಿಲ್ಲ. ಹೋಟೇಲುಗಳಲ್ಲಿ ವೈನ್, ಬಿಯರ್, ಇಲ್ಲವೇ ಕೋಲಾಗಳಿಂದಲೇ ಊಟ ಆರಂಭ. ‘ಮ್ಯಾಗ್ಡೊನಾಲ್ಡ್’ಗಳಲ್ಲಿ ಫ್ರೆಂಚ್ ಪ್ರೈಸ್  ಇರಲಿ, ಸ್ಯಾಂಡ್ವಿಚ್ ಆಗಲಿ, ಬರ್ಗರ್ ಆಗಲಿ ಜೊತೆಗೆ ದೊಡ್ಡ ಗಾತ್ರದ ಕೋಲಾದೊಡನೆಯೇ ನೀಡುತ್ತಾರೆ. ಮಧ್ಯಾಹ್ನದ ಊಟದ ಸಮಯ, ಲೇಖಕಿಯು  ‘ನೀರು, ನೀರು’ ಎಂದು ಬಡಬಡಿಸುವಾಗ, ಸಣ್ಣ ಬಾಟಲಿಯಲ್ಲಿ ನೀರು ಬರುತ್ತಿತ್ತು. ಕುಡಿದು ನೋಡಿದರೆ ಅದು ಬರೀ ಸೋಡಾ. ‘ಸೋಡಾ ಅಲ್ಲ ವಾಟರ್’ ಎಂದು ಕೇಳಿದರು ಇದಕ್ಕೆ ಅವರು ‘ಇದು ನೀರೆ’ ಸ್ಪಾರ್ಕ್ಲಿಂಗ್ ವಾಟರ್’ ಎಂದರು. ‘ನನಗೆ ಹೊಳೆಯುವ ನೀರು ಬೇಡ. ಸಾದಾ ನೀರು ಕೊಡಿ’ ಎಂದರು. ಪುಟ್ಟ ಬಾಟಲು ತರಿಸಿದರು. ಪುಕ್ಕಟ್ಟೆಯಾಗಿ ಏನನ್ನೂ ಕೊಡದಿದ್ದರೆ, ನೀವು ಕೊಳ್ಳುತ್ತೀರಿ. ಕೊಳ್ಳುತ್ತಿರುವುದು ಸೀದಾಸಾದಾ ಅಲ್ಲ ಎಂದು ನಂಬಿಸಿದರೆ, ಮತ್ತಷ್ಟು  ಕೊಳ್ಳುತ್ತೀರಿ. ‘ಕೊಳ್ಳುತ್ತಿರುವುದು ಅದ್ಭುತವಾದದ್ದು’ ಎಂದರೆ ಇನ್ನಷ್ಟು ಕೊಳ್ಳುತ್ತೀರಿ. ಕೊಳ್ಳುಬಾಕ ಸಂಸ್ಕೃತಿಯ ತಳಹದಿಯೇ ಇಲ್ಲಿದೆ. ನೀರು ನಿಮಗೆ ಧಾರಾಳವಾಗಿ ಎಲ್ಲೆಡೆ ಪುಕಟ್ಟೆಯಾಗಿ ತಂಪು ಪಾನೀಯದ ಕಂಪನಿಗಳು ಉಳಿಯುವುದು ಹೇಗೆ? ಸೂಕ್ಷ್ಮ  ರೀತಿಯ ‘ಸೈಕಾಲಜಿಕಲ್ ವಾರ್ ಫೇರ್’.ಅಮೆರಿಕದ ಉದ್ದಗಲವನ್ನು ವಾರಗಟ್ಟಲೆ ಅಲೆವಾಗ, ಎಲ್ಲೆಡೆಯಲ್ಲಿ ಗಮನಿಸಿದ್ದೆ, ದೊಡ್ಡಗಾತ್ರದ ಕೋಲಾ ಬಾಟಲಿಗಳಿಗೆ 0.99 ಡಾಲರ್ ಬೆಲೆ, ಅದೇ ಸಣ್ಣಗಾತ್ರದ ನೀರಿನ ಬಾಟಲಿಗೂ ಅದಕ್ಕಿಂತ ಹೆಚ್ಚಿನ ಹಣ! ಕೊಳ್ಳುವ ಗ್ರಾಹಕನ ಮನಸಿನಲ್ಲಿ ‘ನೀರಿಗೇಕೆ ಅಷ್ಟು ಹಣ? ಅದಕ್ಕಿಂತ ಅಗ್ಗವಾಗಿ ಕೋಲಾ ಸಿಗುತ್ತದೆಯಲ್ಲ?, ಎಂಬ ತರ್ಕ ಹೊಳೆದು ಕೋಲಾ ಅಭ್ಯಾಸ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ನೀರು ಕುಡಿಯುವ ಅಭ್ಯಾಸ ತಪ್ಪುತ್ತದೆ. ವಿದೇಶಗಳಲ್ಲಿ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ಕುಡಿದರೆ ಯಾರ ಪ್ರಾಣ ಏನು ಹೋಗುವುದಿಲ್ಲ. ಆದರೆ ಯಾರು ಕುಡಿಯುವುದಿಲ್ಲ. ಕುಡಿಯುವ ಶುದ್ಧ ನೀರು ಬಾಟಲಿಯಲ್ಲಿ ಮಾತ್ರ ಸಿಗುತ್ತದೆ ಎಂಬುದು ಅಲ್ಲಿಯ ಜನರ ತಲೆಯಲ್ಲಿ ತುಂಬಿದೆ. ನೀರನ್ನು ದುಡ್ಡು ಕೊಟ್ಟು ಕುಡಿಯುವ ಹುನ್ನಾರ ಭಾರತದಲ್ಲಿ ಆರಂಭವಾಗಿದೆ. ಈ ಮರಳುತನಕ್ಕೆ ಭಾರತೀಯರು ಬಲಿಯಾಗಿದ್ದಾರೆ. ನಮ್ಮ ಎಳನೀರು, ಮಜ್ಜಿಗೆ, ಪಾನಕ, ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಎಲ್ಲವನ್ನು ತೊರೆದು ಕೋಲಾಗಳಿಗೆ ಮುಗಿಬೀಳುತ್ತಿರುವ ಜನರ ಸಂಖ್ಯೆ ಏರುತಿದೆ. ಕೊಳ್ಳುಬಾಕತನ, ಲಾಭಕೋರತನದ ರೋಗಗಳು ಸಾಂಕ್ರಾಮಿಕವಾಗಿ ಎಲ್ಲ ನೆಲದಲ್ಲೂ ಹರಡಿ, ಭಾರತಕ್ಕೂ ಲಗ್ಗೆ ಇಟ್ಟಿವೆ. ‘ಸಂಸ್ಕೃತಿಯ ಮೇಲೆ ದಾಳಿ’ ಮಾಡುವ ‘ಮದರ್ಸ್ಡೇ,’ ‘ಫಾದರ್ಸ್ ಡೇ’, ‘ವ್ಯಾಲೆಂಟೈನ್ ಡೇ’ ಗಳನ್ನು ಆಚರಿಸುವಾಗ ‘ಗಿಫ್ಟ್’, ‘ಗ್ರೀಟಿಂಗ್ ಕಾರ್ಡ್’ ಮಾರುವ ಹೊಸ ಹುನ್ನಾರಗಳೆಂದು ಸರ್ವರಿಗೂ ವೇದ್ಯವಾಗಿದೆ. ಆದರೆ ಗಾಬರಿ ಹುಟ್ಟಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು, ನಂಬಿಕೆಗಳನ್ನು, ಮೌಲ್ಯಗಳನ್ನು, ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ಕೊಳ್ಳುಬಾಕತನ’. ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು, ಇಂದು ‘ಬೇಕು’ಗಳ ಬಲೆಗೆ ಬಿದ್ದಿದೆ. ಸರಕಾರಿ ಕಾಲೇಜಿನ ಪ್ರೊಫೆಸರ್ ಮತ್ತು ಪ್ರಾಂಶುಪಾಲರಾದ ಲೇಖಕಿಯ ತಂದೆಗೆ ಕಾಲೇಜಿಗೆ ಸೈಕಲಿನಲ್ಲಿ
ಹೋಗುವುದು ಅಪಮಾನಕರವಾಗಿ ಕಂಡಿರಲೇ ಇಲ್ಲ. ಆದರೆ ಅವರ ಮಗ ಇಂದು ಶಾಲೆಯಲ್ಲಿಯೇ ಬೈಕು ಬೇಕು ಎನ್ನುವುದನ್ನು ತಿಳಿಸಿದ್ದಾರೆ. ಮಾರುಕಟ್ಟೆಗೆ ಬಂದ ವಸ್ತಗಳೆಲ್ಲ ನಮಗೆ ಬೇಕು, ಅದು ನಮಗೆ ಅಗತ್ತವಿದೆ ಎಂಬಂತೆ ಬಿಂಬಿಸುವ ಜಾಹೀರಾತುಗಳಿಗೆ ಬಲಿಯಾಗಿದ್ದಾರೆ. ಇವು ಇಲ್ಲದಿದ್ದರೆ ಬದುಕಿಲ್ಲ  ಎಂಬಂತೆ  ಬಿಂಬಿಸಿ ಕೊಳ್ಳುವಂತೆ   ಪ್ರೇರೇಪಿಸುತ್ತವೆ. ತಂಪು ಪಾನೀಯಾದ ಕಂಪನಿಯವರು ಹೋಟೆಲ್ ಮಾಲೀಕರಿಗೆ “ನೀವು ಹೋಟೆಲ್ಗೆ ಬರುವ ಗ್ರಾಹಕರಿಗೆ  ನೀರು ಕೊಡಬೇಡಿ; ನಮ್ಮ ತಂಪು ಪಾನೀಯವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿ, ನಿಮಗೆ ಇಷ್ಟು ಹಣ ಕೊಡುತ್ತೇವೆ”  ಎಂದು ಹೇಳಿರುವ ವಿಷಯವನ್ನು ಪತ್ರಿಕೆಯಲ್ಲಿ ಲೇಖಕಿಯವರು ಓದಿ ಅಶ್ಚರ್ಯ ಪಟ್ಟಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಸಹ ನೀರು ಕೊಡದ ಸಂಸ್ಕೃತಿ ಬಂದಿದೆ. ಲೇಖಕಿ ಮತ್ತು ಅವರ ಮಗಳು ಮಹಾತ್ಮಗಾಂಧಿ ರಸ್ತೆಯ ‘ಬಾಂಬೆ ಬಜಾರ್’ ಎದುರಿನ ಪುಟ್ಟ ಜಾಯಿಂಟ್ನಲ್ಲಿ ಹೋಗಿ ಕುಳಿತರು . ಇಲ್ಲಿ ನೀರು ತಂದಿಡಲಿಲ್ಲ. ಐಸ್ಕ್ರೀಂ ತಿಂದ ಇವರು ‘ನೀರು ಬೇಕು’ ಎಂದು ಕೇಳಿದರು. ‘ಮಿನಿರಲ್ ವಾಟರ್?’ ವೇಟರ್ ಪ್ರಶ್ನಿಸಿದನು. ‘ಇಲ್ಲಪ್ಪ ಸಾಮಾನ್ಯ ನೀರು’ ಎಂದರು. ಮಾಯವಾದವೇಟರ್ ಹದಿನೈದು ನಿಮಿಷ ಕಾದರೂ  ಬರಲೇ ಇಲ್ಲ. ಕಾದು ಕಾದು ಸುಸ್ತಾಗಿ ಕೊನೆಗೆ ಕೌಟರಿಗೇ ಹೋಗಿ, ಬಿಲ್ಲು ಕೊಟ್ಟು ಹೊರಬಿದ್ದರು. ಅದೇ ವೇಟರ್, ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುವುದು ಕಂಡಿತು. ‘ಮಿನಿರಲ್ ವಾಟರ್?’ ಎಂದ ಅವರು ಕೇಳುವ ಭಂಗಿ ಭಾವ ಹೇಗಿರುತ್ತದೆ ಎಂದರೆ ನಿಮಗೆ ‘ಆರ್ಡಿನರಿ ವಾಟರ್’ ಎಂದು ಹೇಳಲು  ಹಿಂಜರಿಕೆಯಾಗಬೇಕು.
ಮತ್ತೊಂದು  ದಿನ ಮಾಲತಿಯೊಡನೆ ಇಂದಿರಾನಗರದ ಪುಟ್ಟ ಜಾಯಿಂಟ್ಗೆ ಹೋಗಿ ‘ಮಿಸಿಸಿಪಿ ಮಡ್ ಪೀ’ ಆರ್ಡರ್ ಮಾಡಿದರು. ದೊಡ್ಡ ಬಿಳಿ ಪಿಂಗಾಣಿ ತಟ್ಟೆಯಲ್ಲಿ ಕೇಕ್ ಮತ್ತು ಐಸ್ಕ್ರೀಂ ಇರಿಸಿ, ಮೇಲೆ ಕೋಕೋ ಪುಡಿ ಉದುರಿಸಿ ಆಕರ್ಷಕವಾಗಿ ತಂದಿಟ್ಟರು. ಇಲ್ಲೂ ನೀರು ಕೊಟ್ಟಿರಲಿಲ್ಲ . ‘ನೀರು ಕೊಡಿ’ ಎಂದರು ‘ಮಿನಿರಲ್ ವಾಟರ್?’ ಎಂದಳು ಸರ್ವ್ ಮಾಡುತ್ತಿದ್ದ ಹುಡುಗಿ. ‘ಇಲ್ಲ ಸಾಧಾರಣ ನೀರು’ ಎಂದರೆ, ನಮ್ಮಲ್ಲಿ ಸಾಧಾರಣ ನೀರು ಇಲ್ಲ ಎಂದಳು. ಮತ್ತೇ ಲೇಖಕಿಯವರು ‘ಬನ್ನಿ ಮಾಲತಿ ಸಾಗರ್ಗೆ, ಪಾನಿಪುರಿ ತಿನ್ನೋಣ’ ಎಂದೆ. ಎದುರಿಗೊಂದು ‘ಸಾಗರ್’ ಹೋಟೆಲಿತ್ತು. ನುಗ್ಗಿದರು.ಕುಳಿತೊಡನೆ  ವೇಟರ್ ಬಂದು ನಾಲ್ಕು ಲೋಟ ನೀರು ತಂದಿಟ್ಟ. ಬರೀ ಬಾಯಲ್ಲ ಮನಸ್ಸೂ ತಂಪಾಯಿತು.ಹೇಳಿ, ಕಾಯ್ದುಕೊಳ್ಳಬಲ್ಲೆವೇ ವೇ ಮಾನವೀಯ ಮೌಲ್ಯಗಳನ್ನು, ಕೊಳ್ಳುಬಾಕತನದ ಕಪಿಮುಷ್ಠಿಯಿಂದ
ಬಿಡಿಸಿಕೊಳ್ಳಬಲ್ಲವೇ? ಬಾಯಾರಿದವರಿಗೆ ನೀರು ಕೊಡಬಲ್ಲೆವೇ ? ಹಸಿದವರಿಗೆ ಅನ್ನ ಕೊಡಬಲ್ಲವೆ? ಇನ್ನೊಬ್ಬರ ನೀರುಅನ್ನವನ್ನು ಕಸಿದುಕೊಳ್ಳದೆ ಬದುಕಬಲ್ಲವೆ? ನಮ್ಮ ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ಅಸ್ತ್ರ , ನಮ್ಮ ಕೈಯಲ್ಲೇ ಇದೆಯಲ್ಲವೇ? ‘ಮತ್ತೆಂದೂ ನೀರು ಕೊಡದ ಆ ಜಾಯಿಂಟ್ಗೆ ಹೋಗುವುದಿಲ್ಲ. ನನ್ನಿಂದಂತೂ  ಇಂತಹ ಜಾಯಿಂಟ್ಗಳು  ಉದ್ಧಾರವಾಗುವುದು ಬೇಡ’ ಎಂದುಕೊಂಡಿದ್ದೇನೆ  ಎಂದು ಲೇಖಕಿಯ ದೃಢ ಸಂಕಲ್ಪವಾಗಿದೆ. 

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?                      
ಉತ್ತರ : ಯುರೋಪ್ ರಾಷ್ಟ್ರಗಳಲ್ಲಿ , ಅಮೇರಿಕಾದಲ್ಲಿ ಎಲ್ಲಿಯೂ ನೀರು ಕೊಡುವ ಸಂಪ್ರದಾಯವಿಲ್ಲ.

2. ಮನೆಗೆ ಬಂದವರನ್ನು ಹೇಗೆ  ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
ಉತ್ತರ : ಮನೆಗೆ ಬಂದವರನ್ನು ತಣ್ಣನೆಯ ನೀರು ತಂದು ಕೊಟ್ಟು ಉಪಚರಿಸುವ ಅಥವಾ ಸತ್ಕರಿಸುವ
ಸಂಪ್ರದಾಯ ನಮ್ಮಲ್ಲಿದೆ.

3. ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
ಉತ್ತರ : ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು ಕೋಲಾ.

4. ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ?
ಉತ್ತರ : ಭಾರತದಲ್ಲಿ ಇತ್ತೀಚೆಗೆ ಬಾಟಲಿಯಲ್ಲಿ ನೀರನ್ನು ಕೊಂಡು ಕುಡಿಯುವ ಹುನ್ನಾರ  ನಡೆದಿದೆ.

5. ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
ಉತ್ತರ : ಮದರ್ಸ್ಡೇ, ಫಾದರ್ಸ್ಡೇ,ವ್ಯಾ ಲೆಂಟೇನ್ಡೇ    ಆಚರಣೆಯಲ್ಲಿ ಗಿಫ್ಟ್, ಗ್ರೀಟಿಂಗ್ ಕಾರ್ಡ್ಮಾರಾಟ ಮಾಡುವ ಹೊಸ ಹುನ್ನಾರ ಎಂಬ ಅಂಶಗಳು ಸರ್ವರಿಗೂ ವೇದ್ಯವಾಗಿದೆ?
 
 6. ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು? 
 ಉತ್ತರ : ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರಿ ಬಾಯಲ್ಲ , ಮನಸ್ಸು ಕೂಡ ತಂಪಾದ ಅನುಭವಾಯಿತು.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
ಉತ್ತರ : ನಮ್ಮ ದೇಶದಲ್ಲಿ ಸಿಗುವಂತೆ ಬಾಯಾರಿಕೆಯಾದಾಗ ನೀರು ಸಿಗುವುದಿಲ್ಲ. ಮತ್ತು ನೀರು ಕೊಡುವ ಸಂಪ್ರದಾಯವಿಲ್ಲ. ವಿದೇಶಗಳಲ್ಲಿ ಬಾಯಾರಿಕೆಗೆ ಕೋಲಾಗಳು, ಫ್ರೆಂಚ್ ವೈನ್, ಬಿಯರ್, ಬಾಟಲಿಯಲ್ಲಿ ಹಣ್ಣಿನ   ರಸ ಧಾರಾಳವಾಗಿ ದೊರೆಯುತ್ತವೆ.

2. ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು?
ಉತ್ತರ : ಲೇಖಕಿಯವರು ವಿದೇಶಕ್ಕೆ ಹೋಗಲು ದೆಹಲಿಗೆ ಬಂದಿದ್ದರು. ರೋತಕ್ ರಸ್ತೆಯ ಅವರ ಅತ್ತೆಯ
ಮನೆಗೆ ಹೋಗುವಾಗ ಗುರುದ್ವಾರಗಳ ಬಳಿ ನೀರಿನ ದೊಡ್ಡ ಕೊಳಾಯಿ ಹಿಡಿದು ನಿಲ್ಲಿಸಿದ ಆಟೋ, ಬಸ್   ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ತುಂಬಿ ಕುಡಿಸುತ್ತಿದ್ದರು.

3. ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
ಉತ್ತರ : ಕೋಲಾಗಳ ಆಸೆಯಿಂದ ನಾವು ಮುಖ್ಯವಾಗಿ ನೀರು ಕುಡಿಯುವುದನ್ನೇ ತೊರೆಯುತ್ತಿದ್ದೇವೆ. ಏಕೆಂದರೆ ಕೋಲಾಗಿಂತ ನೀರಿಗೆ ಹೆಚ್ಚು ಬೆಲೆ ಕೊಡಬೇಕು. ಅದರೊಂದಿಗೆ ರುಚಿಯಾದ ಮಜ್ಜಿಗೆ ಪಾನಕ, ಎಳನೀರು ಪಾನಕ ಕಬ್ಬಿನಹಾಲು, ತಾಜಾ ಹಣ್ಣನ ರಸ ಎಲ್ಲವನ್ನು  ತೊರೆದ ಕೋಲಾಗಳಿಗೆ ಮುಗಿ ಬೀಳುತ್ತಿದ್ದಾರೆ.

4. ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು?
ಉತ್ತರ : ಕೊಳ್ಳುಬಾಕತನ, ಲಾಭಕೋರತನದ ರೋಗಗಳು ಸಾಂಕ್ರಾಮಿಕವಾಗಿ ಎಲ್ಲ ಕಡೆಯೂ ಹರಡಿ   ,ಭಾರತಕ್ಕೂ ಲಗ್ಗೆ ಇಟ್ಟು ‘ಸಂಸ್ಕೃತಿಯ ಮೇಲೆ ದಾಳಿ’ ಮಾಡುತ್ತಿವೆ. ನಾಗರಿಕತೆ ಸಂಸ್ಕೃತಿಯ ದಾಳಿಯಿಂದ ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲೇಂಟೈನ್ ಡೇ ಆಚರಿಸುವುದು ಪ್ರೀತಿಯ ದ್ಯೋತಕದಿಂದ ಅಲ್ಲ. ಗಿಫ್ಟ್, ಗ್ರೀಟಿಂಗ್ ಕಾರ್ಡ್, ಮಾರುವ ಹೊಸ ಹುನ್ನಾರಕ್ಕಾಗಿ ಈ ಆಚರಣೆ ಲಾಭಕೋರತನ ಇದರ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಮಾರುಕಟ್ಟೆಗೆ ಬಂದ ವಸ್ತುಗಳೆಲ್ಲವೂ ಬೇಕೇಬೇಕು ಎಂಬ ದುರಾಸೆ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತವೆ.

5.ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪುಪಾನೀಯ ಕಂಪನಿ ಹೇಳಿದ್ದೇನು?
ಉತ್ತರ : ಜನಪ್ರಿಯ ಹೋಟಲಿನ ಮಾಲೀಕನಿಗೆ ತಂಪು ಪಾನೀಯದ ಕಂಪನಿಯೊಂದು ಆತನನ್ನು ಸಂಪರ್ಕಿಸಿ ‘ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ, ಇಷ್ಟು ಹಣ ಕೊಡುವುದಾಗಿ’ ಹೇಳಿತ್ತು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

1. ದುಡ್ಡಿಲ್ಲದೇ ಕುಡಿಯಬಲ್ಲ  ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉತ್ತರ : ನಮ್ಮ ನಾಡಿನಲ್ಲಿ ರೈಲು ನಿಲ್ದಾಣಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲೂ ‘ದುಡ್ಡಿಲ್ಲದೆ ಕುಡಿಯಬಲ್ಲ ’ ನೀರನ್ನು ಇರಿಸುತ್ತಿದ್ದರು. ಬಾಯಾರಿದಾಗ ಈಗಲೂ ಹೋಟೆಲು ಒಂದಕ್ಕೆ ಹೋಗಿ ನೀರು ಕುಡಿದು  ಬರಬಹುದು. ಮನೆಯ ಹೊರಗೆ ಕಾಂಪೌಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ “ದನಕರಗಳು ನೀರು ಕುಡಿದುಹೋಗಲಿ” ಎಂದು ನೀರು ತುಂಬಿಡುತ್ತಿದ್ದರು. ಅಲ್ಲಲ್ಲಿ ಅಂಗಡಿಗಳಲ್ಲಿಯೂ ಸಹ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಡುತ್ತಿದ್ದರು. ಅನೇಕ ಗುರುದ್ವಾರದ ಬಳಿ ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು, ನಿಲ್ಲಿಸಿದ ಆಟೋ, ಬಸ್, ಹಾಗೂ ದಾರಿಹೋಕರಿಗೆಲ್ಲ ಉಚಿತವಾಗಿ ನೀರು ತುಂಬಿ ಕುಡಿಸುತ್ತಿದ್ದರು.ಇವೆಲ್ಲವನ್ನು ನಾವು ಕೇವಲ ಭಾರತದಲ್ಲಿ ಕಾಣುತ್ತೇವೆ. ಆದರೆ ವಿದೇಶಗಳಲ್ಲಿ ದುಡ್ಡು ಕೊಟ್ಟರೂ ಸಹ ನೀರು ಸಿಗುವುದಿಲ್ಲ.

2. ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ  ಹೇಗೆ ಬಿಂಬಿಸುತ್ತಿವೆ?  
ಉತ್ತರ : ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು, ನಂಬಿಕೆಗಳನ್ನು, ಮೌಲ್ಯಗಳನ್ನು, ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ಕೊಳ್ಳುಬಾಕತನ’. ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು, ಇಂದು ‘ಬೇಕು’ಗಳ ಬಲೆಗೆ ಬಿದ್ದಿದೆ. ಮಾರುಕಟ್ಟೆಗೆ ಬಂದದ್ದೆಲ್ಲವು ಬೇಕು. ಬೇಕುಗಳನ್ನು  ‘ಅಗತ್ಯ’ಗಳಾಗಿ, ಜಾಹೀರಾತಿನಲ್ಲಿ ಕೊಳ್ಳುವಂತೆ ಬಿಂಬಿಸುತ್ತವೆ. ಆರಾಮ, ಐಷಾರಾಮದ, ಅಪ್ಪಟ ಅನಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ  ಬಿಂಬಿಸುತ್ತಾರೆ. ‘ಡಿಓಡರೆಂಟ್’ ಹಾಕಿಕೊಳ್ಳದೆ ಇದ್ದರೆ ‘ತಾನು ನಾತ  ಬಡಿಯುತ್ತೇನೆ’ ಎಂಬಷ್ಟು ಕೀಳಿರುಮೆಯನ್ನು ಹುಟ್ಟಿಸಬಲ್ಲರು . ಕೊನೆಗೆ ಎಲ್ಲವೂ ನಿಮ್ಮನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ.

3. ಲೇಖಕಿಗೆ ಬೆಂಗಳೂರಿನಲ್ಲಿ ‘ನೀರು ಕೊಡದ ಸಂಸ್ಕೃತಿಯ’ ಬಗ್ಗೆ ಆದ ಅನುಭವವನ್ನು ಬರೆಯಿರಿ.
ಉತ್ತರ : ಲೇಖಕಿ ಮತ್ತು ಅವರ ಮಗಳು ಮಹಾತ್ಮಗಾಂಧಿ ರಸ್ತೆಯ ‘ಬಾಂಬೆ ಬಜಾರ್’ ಎದುರಿನ ಪುಟ್ಟ ಜಾಯಿಂಟ್ನಲ್ಲಿ ಹೋಗಿ ಕುಳಿತರು . ಇಲ್ಲಿ ನೀರು ತಂದಿಡಲಿಲ್ಲ. ಐಸ್ಕ್ರೀಂ ತಿಂದ ಇವರು ‘ನೀರು ಬೇಕು’ ಎಂದು ಕೇಳಿದರು. ‘ಮಿನಿರಲ್ ವಾಟರ್?’ ವೇಟರ್ ಪ್ರಶ್ನಿಸಿದನು. ‘ಇಲ್ಲಪ್ಪ ಸಾಮಾನ್ಯ  ನೀರು’ ಎಂದರು. ಮಾಯವಾದ ವೇಟರ್ ಹದಿನೈದು ನಿಮಿಷ ಕಾದರೂ ಬರಲೇ ಇಲ್ಲ. ಕಾದು ಕಾದು ಸುಸ್ತಾಗಿ ಕೊನೆಗೆ
ಕೌಟರಿಗೇ ಹೋಗಿ, ಬಿಲ್ಲು ಕೊಟ್ಟು ಹೊರಬಿದ್ದರು. ಅದೇ ವೇಟರ್, ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುವುದು ಕಂಡಿತು. ‘ಮಿನಿರಲ್ ವಾಟರ್?’ ಎಂದ ಅವರು ಕೇಳುವ ಭಂಗಿ ಭಾವ ಹೇಗಿರುತ್ತದೆ ಎಂದರೆ ನಿಮಗೆ ‘ಆರ್ಡಿನರಿ ವಾಟರ್’ ಎಂದು ಹೇಳಲೂ  ಹಿಂಜರಿಕೆಯಾಗಬೇಕು. ಮತ್ತೊಂದು  ದಿನ ಮಾಲತಿಯೊಡನೆ ಇಂದಿರಾನಗರದ ಪುಟ್ಟ ಜಾಯಿಂಟ್ಗೆ ಹೋಗಿ ‘ಮಿಸಿಸಿಪಿ ಮಡ್ ಪೀ’ ಆರ್ಡರ್ ಮಾಡಿದರು. ದೊಡ್ಡ ಬಿಳಿ ಪಿಂಗಾಣಿ ತಟ್ಟೆಯಲ್ಲಿ ಕೇಕ್ ಮತ್ತು ಐಸ್ಕ್ರೀಂ ಇರಿಸಿ, ಮೇಲೆ ಕೋಕೋ ಪುಡಿ ಉದುರಿಸಿ ಆಕರ್ಷಕವಾಗಿ ತಂದಿಟ್ಟರು. ಇಲ್ಲೂ ನೀರು ಕೊಟ್ಟಿರಲಿಲ್ಲ . ‘ನೀರು ಕೊಡಿ’ ಎಂದರು ‘ಮಿನಿರಲ್ ವಾಟರ್?’ ಎಂದಳು ಸರ್ವ್ ಮಾಡುತ್ತಿದ್ದ ಹುಡುಗಿ. ‘ಇಲ್ಲ ಸಾಧಾರಣ ನೀರು’ ಎಂದರೆ, ನಮ್ಮಲ್ಲಿ ಸಾಧಾರಣ ನೀರು ಇಲ್ಲ ಎಂದಳು. ಮತ್ತೇ ಲೇಖಕಿಯವರು ‘ಬನ್ನಿ ಮಾಲತಿ ಸಾಗರ್ಗೆ, ಪಾನಿಪುರಿ ತಿನ್ನೋಣ’ ಎಂದೆ. ಎದುರಿಗೊಂದು ‘ಸಾಗರ್’ ಹೋಟೆಲಿತ್ತು. ನುಗ್ಗಿದರು. ಕುಳಿತೊಡನೆ ವೇಟರ್ ಬಂದು ನಾಲ್ಕು ಲೋಟ ನೀರು ತಂದಿಟ್ಟ. ಬರೀ ಬಾಯಲ್ಲ ಮನಸ್ಸೂ ತಂಪಾಯಿತು.

ಈ. ಖಾಲಿಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.
1. ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು __________
2. ಈ ದೇಶಗಳಲ್ಲಿ ಮನೆಯ _______ ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ.
3. ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ_________ ಗಳೆಂದು ಸರ್ವರಿಗೂ ವೇದ್ಯವಾಗಿದೆ.
4. ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ___________ ನೀಡುತ್ತಾರೆ.
ಸರಿ ಉತ್ತರಗಳು.   
1. ನೀರು ಕೊಡದ ನಾಡುಗಳು
2. ನಲ್ಲಿ
3. ಹುನ್ನಾರ  
4ಕೋಲಾ 

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಗುಣಿತಾಕ್ಷರ ಎಂದರೇನು?
ಉತ್ತರ : ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ.

2. ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ.
ಉತ್ತರ : ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ.
ಉದಾ : ಅಪ್ಪ ಅಮ್ಮ ಅಕ್ಷರ ಅಸ್ತ್ರ

3. ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ.
ಉತ್ತರ : ದೇಶ್ಯ ಪದಗಳು ಕೈ, ಕಾಲು, ಬಾಯಿ, ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ಅಣ್ಣ  ಇತ್ಯಾದಿ. ಅನ್ಯದೇಶ್ಯ ಪದಗಳು ಕೋರ್ಟು, ಬ್ಯಾಂಕು, ಹಾರ್ಮೋನಿಯಂ, ಹೋಟೆಲು, ಅಲಮಾರು, ಸಾಬೂನು, ಮೇಜು

4. ಕನ್ನಡದಲ್ಲಿರುವ ಯಾವುದಾದರು ಐದು ತದ್ಭವ ಪದಗಳನ್ನು ಪಟ್ಟಿ ಮಾಡಿ.
ಉತ್ತರ : ಬಸದಿ, ಬೇಸಗೆ, ಕೊಡಲಿ, ಬಸವ, ಬಿನ್ನಣ,

1. ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಹೋಟೆಲ್ – ಹ್+ಓ+ಟ್+ಎ+ಲ್
ಮಾಲೀಕ – ಮ್+ಆ+ಲ್+ಈ+ಕ್+ಅ
ರಸ್ತೆ – ರ್+ಸ್+ತ್+ಎ
ಗ್ರಾಹಕ – ಗ್+ರ್+ಆ+ಹ್+ಅ+ಕ್+ಅ
 ಇವರು – ಇ+ವ್+ಅ+ರ್+ಉ
ಪುಣ್ಯಾತ್ಮ – ಪ್+ಉ+ಣ್+ಯ್+ಆ+ತ್+ಮ್+ಅ

ಕೊಟ್ಟಿರುವ ಪದಗಳಲ್ಲಿರುವ  ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ದಿನಪತ್ರಿಕೆ                    ಅಗತ್ಯ                     ಅಮ್ಮ               ವಸ್ತು
ಪುಕ್ಕಟೆ                     ಹಣ್ಣಿನರಸ                 ನಿಲ್ದಾಣ              ಮಣ್ಣು
ಸಂಪ್ರದಾಯ              ಶುದ್ಧ                         ಅಗ್ಗ               ಸಂಸ್ಕೃತಿ
ಪ್ರವಾಸ                      ಶಕ್ತಿ,                       ಹುನ್ನಾರ .
.
ಸಜಾತೀಯ ವಿಜಾತೀಯ
ಅಮ್ಮ ದಿನಪತ್ರಿಕೆ
ಪುಕ್ಕಟ್ಟೆ ಅಗತ್ಯ
ಹಣ್ಣಿನರಸ ವಸ್ತು
ಮಣ್ಣು ನಿಲ್ದಾಣ 
ಶುದ್ಧ ಸಂಪ್ರದಾಯ 
ಅಗ್ಗ ಸಂಸ್ಕೃತಿ 
ಹುನ್ನಾರ ಪ್ರವಾಸ 
ಶಕ್ತಿ 

ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ
ವರ್ಷ – ವರುಷ
ಪ್ರಾಣ – ಹರಣ
ಶಕ್ತಿ – ಶಕುತಿ
ಪುಣ್ಯ – ಹೂನ

ಕೊಟ್ಟಿರುವ ಪದಗಳಲ್ಲಿರುವ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಆರಿಸಿ ಬರೆಯಿರಿ
ದೊಡ್ಡದು ಬಸ್ಸು     ಬರ್ಗರ್ ಪಾನಕ ವಾಟರ್ ಸಣ್ಣ ಹುನ್ನಾರ
ದೇಶೀಯ ಪದಗಳು : ದೊಡ್ಡದು, ಪಾನಕ, ಸಣ್ಣ  ಹುನ್ನಾರ.
ಅನ್ಯ ದೇಶೀಯ ಪದಗಳು : ಬರ್ಗರ್, ಬಸ್ಸು, ವಾಟರ್.     

You Might Like

Post a Comment

0 Comments