Recent Posts

ಹಸುರು - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು



ಹಸುರು
 
 

ಕವಿ ಪರಿಚಯ

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು .  ಜನನ ೧೯೦೪ ಡಿಸೆಂಬರ್ ೨೯ ,  ಇವರು ಬರೆದಿರುವ ಪ್ರಮುಖ ಕೃತಿಗಳು : ಕೊಳಲು , ಪಾಂಚಜನ್ಯ , ಪ್ರೇಮಕಾಶ್ಮೀರ , ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು , ನನ್ನ ದೇವರು ಮತ್ತು ಇತರ ಕಥೆಗಳು , ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು , ಕಾನೂರು ಹೆಗ್ಗಡತಿ , ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು . ರಸೋವೈಸಃ , ತಪೋನಂದನ – ವಿಮರ್ಶಾ ಸಂಕಲನಗಳು , ಅಮಲನ ಕಥೆ , ಮೋಡಣ್ಣನ ತಮ್ಮ , ಬೊಮ್ಮನಹಳ್ಳಿಯ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು , ಜಲಗಾರ , ಯಮನ ಸೋಲು , ಬೆರಳೆ ಕೊರಳ್ – ನಾಟಕಗಳು , ನೆನಪಿನ ದೋಣಿಯಲ್ಲಿ – ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ . ಶ್ರೀಯುತರಿಗೆ ‘ ಶ್ರೀರಾಮಾಯಣ ದರ್ಶನಂ ‘ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ . ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಇವರಿಗೆ ೧೯೬೪ ರಲ್ಲಿ ರಾಷ್ಟ್ರಕವಿ , ೧೯೮೮ ರಲ್ಲಿ ಪಂಪ ಪ್ರಶಸ್ತಿ , ೧೯೯೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ .
ಅಲ್ಲದೆ ಮೈಸೂರು , ಕರ್ನಾಟಕ , ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ . ೧೯೯೨ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ . ಪ್ರಸ್ತುತ ಪದ್ಯಭಾಗವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಆ)ಕೊಟ್ಟಿರುವ ಪ್ರಶ್ನೆಗಳಿಗೆ  ಒಂದು ವಾಕ್ಯದಲ್ಲಿ ಉತ್ತರಿಸಿ .

೧.ಆಶ್ವಯುಜ೦ದ ಬತ್ತದ ಗದ್ದೆಯ ಬಣ್ಣಯಾವ ಹಸುರಿನಂತಿದೆ?
ಉ : ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ .

೨. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?
 ಉ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ .

೩. ‘ ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?
ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ .

೪. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?
ಉ : ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

೧ ) ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ?
ಉ : ಕವಿಗೆ ನವರಾತ್ರಿಯಲ್ಲಿ , ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ , ನೀಲ ಸಮುದ್ರದಲ್ಲಿ ಹಸುರಾದ ಕವಿಯ ಹೃದಯಕ್ಕೆ ಆಗಸ ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಎಲರಿನ ತಂಪಿನಲ್ಲಿ ಹಕ್ಕಿಯ ಕೊರಲಿನಲ್ಲಿ , ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ .

೨ ) ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?
ಉ : ಹಸುರಾದ ಭೂಮಿ , ಆಗಸ , ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ , ಹೂವಿನ ಕಂಪಿನ ಹಸುರು ಮೂಗಿಗೆ , ಎಲರಿನ ತಂಪಿನ ಸ್ಪರ್ಷ ಚರ್ಮಕ್ಕೆ , ಹಕ್ಕಿಯ ಕೊರಲಿನ ಚಿಲಿಪಿಲಿ ಗಾನ ಕಿವಿಗೆ , ಶ್ಯಾಮಲ ಸಮುದ್ರದ ಹಸುರು ಕವಿಯಾತ್ಮಕ್ಕೆ ರಸಪಾನ ಮಾಡಿದಂತಾದುದು ನಾಲಗೆಗೆ ಹೀಗೆ ಪ್ರಕೃತಿಯ ಹಸುರು ಸಕಲ ಇಂದ್ರಿಯಗಳನ್ನೂ ವ್ಯಾಪಿಸಿದೆ ಎಂಬುದನ್ನು ಕವಿ ಕುವೆಂಪು ಅವರು ಅಭೂತಪೂರ್ಣವಾಗಿ ವರ್ಣಿಸಿದ್ದಾರೆ .
 
೩ ) ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು ?
 ಉ : ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲ ಕಡಲು , ಹಸುರಾಗಸ ; ಹಸುರು ಮುಗಿಲು ; ಹಸುರು ಗದ್ದೆಯ ಬಯಲು , ಹಸುರಿನ ಮಲೆ ; ಹಸುರು ಕಣಿವೆ : ಸಂಜೆಯ ಬಿಸಿಲು , ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ ; ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಭೂಮಿಯು ಹಸುರುಟ್ಟಿದ್ದು ಹೊಸ ಹೂವಿನ ಕಂಪು ; ತಂಗಾಳಿಯ ತಂಪು : ಹಕ್ಕಿಯ ಇಂಪಾದ ಗಾನ ; ಎತ್ತೆತ್ತ ನೋಡಿದರೂ ಹಸುರು ಹಸುರು . ಹಸರು .. ಈ ಇವೆಲ್ಲಾ ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳಾದವು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

೧. ‘ ಹಸುರು ‘ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ .
ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲದಲ್ಲಿ ಅವರಿಗುಂಟಾದ ಸೌಂದರ್ಯಾನುಭವ ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ . ವಿಶಾಲವಾದ ಕವಿಯಾತವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು . ಆಗಸದಲ್ಲಿ ಮುಗಿಲಿನಲ್ಲಿ ಗದ್ದೆಯ ಬಯಲಿನಲ್ಲಿ : ಬೆಟ್ಟಗುಡ್ಡಗಳಲ್ಲಿ : ಕಣಿವೆಯಲ್ಲಿ : ಸಂಜೆಯ ಬಿಸಿಲಿನಲ್ಲಿ ಹಸುರು ಹರಡಿತ್ತು . ಹಾಗೆಯೇ ಅಶ್ವಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ , ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು . ಹೊಸ ಹೂವಿನ ಕಂಪು ; ತಂಗಾಳಿಯ ತಂಪು ; ಹಕ್ಕಿಯ ಇಂಪಾದ ಗಾನ ; ಅತ್ತ – ಇತ್ತ – ಎತ್ತ ನೋಡಿದರೂ ಹಸುರು . ಹಸುರು .. ಹಸರು .. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು . ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು . ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ವರ್ಣಿಸಿದ್ದಾರೆ .

೨. ಪ್ರಕೃತಿಯ ‘ ಹಸುರು ‘ ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ .
 ( ಮಕ್ಕಳ ಸೃಜನಶೀಲತೆಗಾಗಿ ಬಿಡಲಾಗಿದೆ )

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

೧. “ ಹಸುರಾದುದು ಕವಿಯಾತ್ಮಂ ‘
ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ತೆಗೆದುಕೊಳ್ಳಲಾಗಿದೆ .
ಸಂದರ್ಭ : ನವರಾತ್ರಿಯ ನವರಾತ್ರಿಯ ಈ ಶ್ಯಾಮಲ ವರ್ಣದ ಕಡಲಿನಲ್ಲೂ ಕವಿಯ ಆತ್ಮ ಹಸುರಾಯಿತು , ರಸಪಾನದಲ್ಲಿ ಮಿಂದಿತು ಎಂದು ಪ್ರಕೃತಿಯಲ್ಲಿ ವ್ಯಾಪಿಸಿರುವ ಹಸುರಿನ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲ’ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ , ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ .
ಸ್ವಾರಸ್ಯ : ನವರಾತ್ರಿಯ ಕಪ್ಪು ಕಡಲಿನಲ್ಲೂ ಹಸುರನ್ನು ಕಾಣುವ ಕುವೆಂಪು ಅವರ ಕವಿಯಾತ್ಮದ ಪ್ರಕೃತಿಯ ರಸಾಸ್ವಾದನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

೨” ಬೇರೆ ಬಣ್ಣವನೆ ಕಾಣೆ ”
ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಅಶ್ವಿಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಆಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭೂಮಿಯ ಮೇಲೆ ಎಲ್ಲೆಂದರಲ್ಲಿ ವಿವಿಧ ರೂಪದಲ್ಲಿ ಹಸುರು ಪಸರಿಸಿರುವುದನ್ನು ನೋಡಿ ರಸಾನಂದ ಹೊಂದಿದ ಕವಿ ‘ ಬೇರೆ ಬಣ್ಣಗಳೇ ಕಾಣದಾದವು ‘ ಎಂದು ಹೇಳಿರುವಲ್ಲಿ ಅವರ ರಸಾಸ್ವಾದನೆಯ ಔನ್ನತ್ಯವನ್ನು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ

೩. “ ಹಸುರು ಹಸುರಿಳೆಯುಸಿರೂ ” ಹಳತ
ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಹೊಸ ಹೂವಿನ ಕಂಪು , ಬೀಸುವ ಗಾಳಿಯ ತಂಪು , ಹಕ್ಕಿಯ ಕೊರಲಿನಿಂದ ಹೊರಟ ಗಾನದ ಇಂಪು , ಅಲ್ಲದೆ ಇಡೀ ಭೂಮಿಯ ಶ್ವಾಸವೆಲ್ಲಾ ಹಸುರುಮಯವಾಗಿದೆ ಎಂದು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ಇಲ್ಲಿ ಹೂವು – ಗಾಳಿ ಹಕ್ಕಿಯ ಗಾನಗಳಲ್ಲಿ ಬೇರೆ ಬೇರೆ ಅನುಭವವಿದ್ದರೂ ಕವಿಯ ಏಕತಾ ದೃಷ್ಟಿಯಲ್ಲಿ ಎಲ್ಲದರಲ್ಲೂ ಹಸುರೇ ಕಾಣುತ್ತದೆ .
ಸ್ವಾರಸ್ಯ : ಹಸುರು ಸರ್ವೇಂದ್ರಿಯಗಳನ್ನೂ ವ್ಯಾಪಿಸಿದೆ ಎಂದು ವರ್ಣಿಸಿರುವ ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

೪. ” ಹಸುರತ್ತಲ್ , ಹಸುರಿತ್ತಲ್ , ಹಸುರೆತ್ತಲ್ ”
ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಅತ್ತ – ಇತ್ತ – ಎತ್ತಲೂ ಹಸುರೇ ಆವರಿಸಿರುವುದನ್ನು ಕವಿದೃಷ್ಟಿಯಿಂದ ನೋಡಿದ ಕುವೆಂಪು ಅವರು ‘ ಕಡಲಿನಲ್ಲಿ ಎಲ್ಲೆಲ್ಲೂ ಹಸುರೇ ಹಸುರು . ಕವಿಯ ಆತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತು ‘ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು
ಹೇಳಿದ್ದಾರೆ . ಎಲ್ಲೆಲ್ಲೂ ಹಸುರನ್ನು ಕಂಡ ಕವಿಯಾತ್ಮವು ಹಸುರುಗಟ್ಟಿತಲ್ಲದೆ ಅವರ ದೇಹದಲ್ಲಿನ ರಕ್ತವೂ ಹಸುರೇ ! ಎಂದು ವರ್ಣಿಸಿದ್ದಾರೆ .
ಸ್ವಾರಸ್ಯ : ಹಸುರು ಕೇವಲ ಸಸ್ಯವರ್ಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಪ್ರಕೃತಿಯ ಚೈತನ್ಯಕ್ಕೆ ಅದೇ ಕಾರಣ . ಪ್ರಕೃತಿಗಷ್ಟೇ ಅಲ್ಲದೆ ‘ ರಕ್ತದಲ್ಲೂ ಹಸುರು ವ್ಯಾಪಿಸಿದೆ ‘ ಎಂದು ಸ್ವಾರಸ್ಯಪೂರ್ಣವಾಗಿದೆ .
You Might Like

Post a Comment

0 Comments