Recent Posts

ಕರ್ನಾಟಕದ ವೀರ ವನಿತೆಯರು - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಕರ್ನಾಟಕದ ವೀರ ವನಿತೆಯರು.
 
ಕವಿ ಪರಿಚಯ:-
 
*ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ*                                                                          
ಜನ್ಮ ವರ್ಷ: ಅಗಸ್ಟ್ 6, 1950                                                                                        
ಜನ್ಮ ಸ್ಥಳ: ಬೆಳಗಾವಿ                                                                                             
ಕೃತಿಗಳು: 1) ಸಮಾಜ ವಿಕಾಸಕ್ಕೆ ಶರಣ ಸಂಸ್ಕೃತಿ, 2) ಜೀವನ್ಮುಕ್ತಿ, 3) ಚಿಣ್ಣರಚಿತ್ತಾರ, 4) ಚಿಣ್ಣರ ಚಿಲಿಪಿಲಿ, 5)ಜೀವನಧಾರೆ.

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಪೋರ್ಚುಗೀಸರು ಕೇಳಿದ ಬೆಲೆಗೆ ವಸ್ತುಗಳನ್ನು ಕೊಡಲು ಅಬ್ಬಕ್ಕದೇವಿಯು ಏಕೆ ಒಪ್ಪಲಿಲ್ಲ?
- ರೈತರು ಬೆಳೆದ ಬೆಳೆಗಳನ್ನು ಹಾಗೂ ನೇಕಾರರು ನೇಯ್ದ ಬಟ್ಟೆಗಳನ್ನು ಪೋರ್ಚುಗೀಸರು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ಯೋಚಿಸಿದ್ದರು. ಆದ್ದರಿಂದ ಅಬ್ಬಕ್ಕದೇವಿ ಇದಕ್ಕೆ ಒಪ್ಪಲಿಲ್ಲ.

2) ಮಲ್ಲಮ್ಮಾಜಿಯ ಪರಾಕ್ರಮದಲ್ಲಿ ಈಶಪ್ರಭುವಿಗೆ ಅಪಾರ ನಂಬಿಕೆ ಇತ್ತು ಏಕೆ?
- ಒಂದು ಸಲ ವಿಹಾರಕ್ಕೆ ಹೋದಾಗ ಈಶಪ್ರಭು ನಿದ್ರಿಸಿದಾಗ ಬಂದ ಎರಡು ಹುಲಿಗಳನ್ನು ಸಾಯಿಸಿದ ಮಲ್ಲಮ್ಮಾಜಿಯ ಪರಾಕ್ರಮದಲ್ಲಿ ಈಶಪ್ರಭುಗಳಿಗೆ ಅಪಾರ ನಂಬಿಕೆ ಇತ್ತು.

3) ವಿಜಯೋತ್ಸವದ ಸಂಭ್ರಮದಲ್ಲಿದ್ದ ಮಲ್ಲಮ್ಮಾಜಿಗೆ ಆಘಾತವಾಯಿತು ಏಕೆ?
- ವಿಜಯೋತ್ಸವದ ಸಂಭ್ರಮದಲ್ಲಿದ್ದ ಮಲ್ಲಮ್ಮಾ ಗಂಡನಿಗೆ ತಿಳಿಸಲು ಹೋದಾಗ ಅವಳಿಗೆ ಆಘಾತವಾಯಿತು. ಕಾರಣ ಶಿವಾಜಿಯ ಸೈನಿಕರನ್ನು ಸೋಲಿಸಲು ಅತ್ತ ಹೋದಾಗ ಇತ್ತ 10,000 ಮರಾಠ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿ ಈಶಪ್ರಭುಗಳನ್ನು ತೀವ್ರವಾಗಿ ಗಾಯಗೊಳಿಸಿದ್ದರು.

4) ಪೋರ್ಚುಗೀಸರು ವ್ಯಾಪಾರಕ್ಕಾಗಿ ಭಾರತಕ್ಕೆ ಏಕೆ ಬಂದರು?
- ರೈತರು ಬೆಳೆದ ಬೆಳೆಯ ಹಾಗೂ ನೇಕಾರರು ನೇಯ್ದ ಬಟ್ಟೆಯ ವ್ಯಾಪಾರಕ್ಕಾಗಿ ಪೋರ್ಚುಗೀಸರು ಭಾರತಕ್ಕೆ ಬಂದರು.

5) ದೇಸಾಯಿ ಈಶಪ್ರಭು ಕಿಡಿಕಿಡಿಯಾದುದೇಕೆ?
- ಶಿವಾಜಿಯ ಸೈನಿಕರು ಹಳ್ಳಿಗರ ಜಾನುವಾರುಗಳನ್ನು ಅಪಹರಿಸಿಕೊಂಡು ಹೋಗಿ ಅವರಿಗೆ ಕಿರುಕುಳ ಕೊಡುವುದನ್ನು ಕೇಳಿ ದೇಸಾಯಿ ಈಶಪ್ರಭುಗಳು ಕಿಡಿಕಿಡಿಯಾದರು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಜಿನೋವದ ಪ್ರವಾಸಿ ಪಿತ್ರೋ ಅಬ್ಬಕ್ಕನನ್ನು ಕುರಿತು ಏನೆಂದು ಬರೆದಿದ್ದಾನೆ?
- ವೀರರಾಣಿ ಅಬ್ಬಕ್ಕದೇವಿ ತಮ್ಮ ರೈತರು ಬೆಳೆದ ಬೆಳೆಗಳನ್ನು, ನೇಕಾರರು ನೇಯ್ದ ಬಟ್ಟೆಯನ್ನು ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ಕೇಳಿದ ಬೆಲೆಗೆ ಕೊಡಲು ಒಪ್ಪಲಿಲ್ಲ. ಅನ್ಯಾಯವಾಗಿ ಪೋರ್ಚುಗೀಸರು ಪಡೆಯತ್ತಿದ್ದ ವಾರ್ಷಿಕ ಕಪ್ಪನ್ನು ವಿರೋಧಿಸಿದಳು. ಅವರ ಆರ್ಥಿಕ ಶೋಷಣೆಗೆ ತಲೆ ಬಾಗದ ರಾಣಿ ಅಬ್ಬಕ್ಕದೇವಿ ವಿವೇಚನಾಶೀಲಳೂ, ನ್ಯಾಯಪರಳೂ, ಕುಶಲಳೂ ಆಗಿದ್ದಳೆಂದು ಪಿತ್ರೋ ಬರೆದಿದ್ದಾನೆ.

2) ಕಿತ್ತೂರು ಚೆನ್ನಮ್ಮಾಳು ಸೆರೆಯಾದುದೇಕೆ? (2018)
- ಬ್ರಿಟಿಷರು ಕಿತ್ತೂರಿನ ಕೆಲವರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡರು. ಆ ಹಿತಶತ್ರುಗಳು ಕಿತ್ತೂರಿನ ಕೋಟೆಯ ಮೇಲಿರುವ ತೋಪಿನಲ್ಲಿ ಸೆಗಣಿ ಸೇರಿಸಿ ತೋಪುಗಳು ಬ್ರಿಟಿಶ್ ಸೈನ್ಯದ ವಿರುದ್ಧ ಹಾರದಂತೆ ಮಾಡಿದರು. ಮುಂದೆ ಬ್ರಿಟಿಶ್ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿ ಅನ್ಯಾಯವಾಗಿ ಮೋಸದಿಂದ ಚೆನ್ನಮ್ಮಾಜಿಯನ್ನು ಸೆರೆಹಿಡಿದರು.

3) ಕೆಳದಿಯ ಚೆನ್ನಮ್ಮಾ ತನ್ನ ರಾಜಧಾನಿಯನ್ನು ಭುವನಗಿರಿಗೆ ಏಕೆ ಸ್ಥಳಾಂತರಿಸಿದಳು?
- ಕೆಳದಿಯ ರಾಣಿ ಚೆನ್ನಮ್ಮಾ ಮೊಘಲರಿಗೆ ಅಂಜಿ ತಲೆಮರೆಸಿಕೊಂಡು ಓಡಿ ಬಂದ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದಳು. ಈ ವಿಷಯ ತಿಳಿದ ಔರಂಗಜೇಬ ತನ್ನ ಮಗ ಅಜಮತಾರಾನ ಜೊತೆಗೆ ಭಾರಿ ಸೈನ್ಯವನ್ನು ಕೆಳದಿಯ ಕಡೆಗೆ ಕಳುಹಿಸಿದನು. ಆದರೆ ಚಾಣಾಕ್ಷಳಾದ ಚೆನ್ನಮ್ಮಾ ಮೊಘಲರ ಆಕ್ರಮಣದಿಂದ ಪಾರಾಗಲು ತನ್ನ ರಾಜಧಾನಿಯನ್ನು ಬು ವನಗಿರಿಗೆ ಸ್ಥಳಾಂತರಿಸಿ ಶತ್ರು ಸೈನಿಕರಿಗೆ ಅನ್ನ, ನೀರು ಸಿಗದಂತೆ ಮಾಡಿದಳು.

4) ಪೋರ್ಚುಗೀಸರು ಭಾರತೀಯರನ್ನು ಯಾವ ರೀತಿಯಲ್ಲಿ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದರು?
- ಪೋರ್ಚುಗೀಸರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಿದ್ದರು. ರೈತರು ಬೆಳೆದ ಬೆಳೆಗಳನ್ನು ಹಾಗೂ ನೇಕಾರರ ನೇಯ್ದ ಬಟ್ಟೆಗಳನ್ನು ಅವರು ಅತಿಕಡಿಮೆ ಬೆಲೆಗೆ ಕೊಳ್ಳಲು ಬಯಸಿದರು. ಇಲ್ಲಿನ ಸ್ಥಳೀಯ ಆಸ್ಥಾನದ ರಾಜರುಗಳಿಂದ ಅವರು ವಾರ್ಷಿಕ ಕಪ್ಪನ್ನು ಪಡೆಯುತ್ತಿದ್ದರು. ಹೀಗೆ ಪೋರ್ಚುಗೀಸರು ಭಾರತೀಯರ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದರು.

ಇ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
 
1) ಒಬ್ಬಂಟಿಗರಾದ  ನಿಮ್ಮನ್ನು ನೋಡುವವರ್ಯಾರು?
- ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.                                                                    
ಲೇಖಕಿಯರ ಹೆಸರು: ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ.                                                          
ಸಂದರ್ಭ: ರಾಣಿ ಅಬ್ಬಕ್ಕದೇವಿ ಈ ಮಾತನ್ನು ಪಿತ್ರೋನಿಗೆ ನುಡಿದಿದ್ದಾಳೆ.                                                  
ವಿವರಣೆ: ಇಟಲಿ ದೇಶದ ಪ್ರವಾಸಿ ಪಿತ್ರೋ ಭಾರತಕ್ಕೆ ಬಂದು ರಾಣಿ ಅಬ್ಬಕ್ಕ ದೇವಿಯನ್ನು ಬೆಟಿಯಾಗುತ್ತಾನೆ. ವಿಶ್ವ ವಿಖ್ಯಾತರಾದ ನಿಮ್ಮನ್ನು ಅಷ್ಟು ದೂರದಿಂದ ನೋಡಲು ಬಂದದ್ದು ಸಾರ್ಥಕವಾಯಿತು ಎಂದಾಗ ರಾಣಿ ಅಬ್ಬಕ್ಕ ಈ ಮೇಲಿನ ಮಾತನ್ನು ಪಿತ್ರೋನಿಗೆ ನುಡಿದು ಸ್ತ್ರೀ ಸಹಜವಾದ ವಾತ್ಸಲ್ಯದಿಂದ ವಿಚಾರಿಸಿಕೊಂಡಿದ್ದಳು.

2) ದೇವಿ ನನ್ನ ಅಪರಾಧವನ್ನು ಕ್ಷಮಿಸು.
- ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.                                                             
ಲೇಖಕಿಯರ ಹೆಸರು: ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ.                                                          
ಸಂದರ್ಭ: ಶಿವಾಜಿ ಮಹಾರಾಜರು ಈ ಮಾತನ್ನು ಬೆಳವಡಿಯ ಮಲ್ಲಮ್ಮಾಜಿಗೆ ನುಡಿದಿದ್ದಾರೆ.                                    
ವಿವರಣೆ: ಶಿವಾಜಿ ಮಹಾರಾಜರು ತಮ್ಮ ಎಂಟು-ಹತ್ತು ಸರದಾರರೊಂದಿಗೆ ಜಗದಾಂಬೆಯ ದರ್ಶನ ಪಡೆದು ಮರಳುತ್ತಿದ್ದಾಗ ಬೆಳವಡಿಯ ಮಲ್ಲಮ್ಮ ಅವರೆಲ್ಲರ ಮೇಲೆ ಮಿಂಚಿನಂತೆ ಎರಗಿ ಖಡ್ಗದ ಹೊಡೆತದಿಂದ ನೆಲಕ್ಕುರುಳಿಸಿದಳು. ಹಠಾತ್ತನೆ ದಾಳಿ ಮಾಡಿದ ರಾಣಿಯನ್ನು ಕಂಡು ಶಿವಾಜಿ ಮಹಾರಾಜರು ತಲ್ಲಣಗೊಂಡು ಈ ಮೇಲಿನ ಮಾತನ್ನು ನುಡಿದು ಕ್ಷಮೆಯಾಚಿಸಿದ್ದರು.  

3) ಇತಿಹಾಸದಲ್ಲಿಯೇ ಅಪೂರ್ವ ಮತ್ತು ಅಮೋಘ ಸಾಧನೆ.
- ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.                                                               
ಲೇಖಕಿಯರ ಹೆಸರು: ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ.                                                            
ಸಂದರ್ಭ: ಲೇಖಕಿ ಈ ಮಾತನ್ನು ಕೆಳದಿಯ ರಾಣಿ ಚೆನ್ನಮ್ಮಾಳ ಕುರಿತು ನುಡಿದಿದ್ದಾರೆ.                                               
ವಿವರಣೆ: ಕರ್ನಾಟಕದ ಮಲೆನಾಡಿನ ಪುಟ್ಟರಾಜ್ಯದ, ಚಿಕ್ಕ ವಯಸ್ಸಿನಲ್ಲಿ ಗಂಡನ ಭೀಕರಕೊಲೆಯನ್ನು ಕಂಡ ಕೆಳದಿಯ ರಾಣಿ ಚೆನ್ನಮ್ಮಾ, ಬಲಾಡ್ಯ ಮೊಗಲ್ ಚಕ್ರವರ್ತಿಯಾದ ಔರಂಗಜೇಬನ್ನು ಸೋಲಿಸಿದ್ದು ಇತಿಹಾಸದಲ್ಲಿಯೇ ಅಪೂರ್ವ ಮತ್ತು ಅಮೋಘ ಸಾಧನೆ! ಎಂದು ಲೇಖಕಿಯವರು ಹೇಳಿದ್ದಾರೆ.  

4) ತಾಯಿ ಎಂದು ಕರೆದ ಕನ್ನಡದ ಕಂದ ಯಾರು?
- ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.                                                                         
ಲೇಖಕಿಯರ ಹೆಸರು: ಡಾ|| ವಿಜಯಲಕ್ಷ್ಮೀಬಾಳೇಕುಂದ್ರಿ.                                                              
ಸಂದರ್ಭ: ಕಿತ್ತೂರಿನ ರಾಣಿ ಚೆನ್ನಮ್ಮಾ ಈ ಮಾತನ್ನು ಸಂಗೊಳ್ಳಿ ರಾಯಣ್ಣನ ಕುರಿತು ನುಡಿದಿದ್ದಾಳೆ.                                  
ವಿವರಣೆ: ಬ್ರಿಟಿಷರು ಮೋಸಮಾಡಿ ರಾಣಿ ಚೆನ್ನಮ್ಮಾಳನ್ನು ಬಂಧಿಸಿ ಸೆರೆಮನೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣ ಚೆನ್ನಮ್ಮಾಳನ್ನು ಭೇಟಿಯಾಗಲು ಬಂದಾಗ, ತಾಯಿ ಎಂದು ಕರೆದಿದ್ದ. ಆಗ ರಾಣಿ ಚೆನ್ನಮ್ಮಾ ಈ ಮೇಲಿನ ಮಾತನ್ನು ರಾಯಣ್ಣನ ಬಗೆಗೆ ನುಡಿದು ಅಭಿಮಾನ ವ್ಯಕ್ತಪಡಿಸಿದ್ದಳು.

5) ಇದು ನಮ್ಮ ಕೊನೆಯ ಭೇಟಿ. 
- ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.                                                              
ಲೇಖಕಿಯರ ಹೆಸರು: ಡಾ|| ವಿಜಯಲಕ್ಷ್ಮೀಬಾಳೇಕುಂದ್ರಿ.                                                             
ಸಂದರ್ಭ: ಬೆಳವಡಿಯ ಮಲ್ಲಮ್ಮಾಜೀ ತನ್ನ ಪ್ರಜೆಗಳನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಳು.                                
ವಿವರಣೆ: ಮಲ್ಲಮ್ಮಾಜೀ ಗಂಡನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶಕ್ತಿಯ ಜೊತೆಗೆ ಯುಕ್ತಿಯಿಂದ ದಿಟ್ಟಹೆಜ್ಜೆ ಇಟ್ಟಳು. ತನ್ನಪ್ರಜೆಗಳಿಗೆ ಈ ಮೇಲಿನ ಮಾತು ನುಡಿದು, ತನ್ನ ಸ್ತ್ರೀ ಸೈನ್ಯದೊಂದಿಗೆ ಗುಪ್ತಮಾರ್ಗವಾಗಿ ಶಿವಾಜಿ ಮಹಾರಾಜರ ಹಾಗೂ ಅವರ ಸೈನಿಕರ ಜೊತೆಗೆ ಯುದ್ಧ ಮಾಡಲು ಹೊರಟಳು.

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಶಿವಾಜಿಯು ಮಲ್ಲಮ್ಮಾಜಿಯೊಂದಿಗೆ ರಾಜಿ ಮಾಡಿಕೊಂಡ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
- ಮಲ್ಲಮ್ಮಾಜೀ ಗಂಡನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶಕ್ತಿಯ ಜೊತೆಗೆ ಯುಕ್ತಿಯಿಂದ ದಿಟ್ಟ ಹೆಜ್ಜೆ ಇಟ್ಟಳು. ಸರದಾರ ಶಾಂತಯ್ಯನನ್ನು ಕರೆದು ಶಿವಾಜಿ ಮಹಾರಾಜರು ಸಿದ್ದ ಸಮುದ್ರದಲ್ಲಿರುವ ದ್ಯಾಮವ್ವ ಎಂಬ ಜಾಗೃತ ಜಗದಾಂಬೆಯ ದರ್ಶನಕ್ಕೆ ಬರುವಂತೆ ಮಾಡಿದಳು. ತನ್ನ ಸ್ತ್ರೀ ಸೈನ್ಯದೊಂದಿಗೆ ಮುನ್ನುಗ್ಗಿದ ಮಲ್ಲಮ್ಮಾ ಎಂಟು-ಹತ್ತು ಸರದಾರರೊಂದಿಗೆ ಜಗದಾಂಬೆಯ ದರ್ಶನ ಪಡೆದು ಹಿಂದಿರುಗುವಾಗ ಶಿವಾಜಿಯ ಸರದಾರರ ಮೇಲೆ ಮಿಂಚಿನಂತೆ ಎರಗಿ ಖಡ್ಗದ ಹೊಡೆತದಿಂದ ನೆಲಕ್ಕುರುಳಿಸಿದಳು. ಶಿವಾಜಿ ಮಹಾರಾಜರು ತಲ್ಲಣಗೊಂಡು ಕುದುರೆಯ ಮೇಲಿಂದ ಕೆಳಗಿಳಿದು ದೇವಿ ನನ್ನ ಅಪರಾಧವನ್ನು ಕ್ಷಮಿಸು ನಾನು ನಿನ್ನ ಮಗನೆಂದು ತಿಳಿ ಎಂದಾಗ ರಾಣಿ ನನ್ನ ಪತಿಯನ್ನು ಕೊಂದು ಈಗ ಕ್ಷಮೆಯಾಚಿಸುತ್ತಿದ್ದೀರಾ? ಎಂದಳು. ಆಗ ಶಿವಾಜಿ ಅದರಲ್ಲಿ ನನ್ನ ತಪ್ಪೇನಿಲ್ಲ ಅದು ನನ್ನದುಷ್ಟ ಸರದಾರನ ಕೆಲಸವಿರಬಹುದು ಎಂದು ಪ್ರತಿಪಾದಿಸಿದರು. ಮುಂದೆ ಇಬ್ಬರೂ ರಾಜಿ ಮಾಡಿಕೊಂಡರು. ಈ ರಾಜಿ ಮಾಡಿಕೊಂಡ ಪ್ರಸಂಗವನ್ನು ಶಿಲ್ಪಿಯೊಬ್ಬ ಯಾದವಾಡದಲ್ಲಿ ಶಿಲ್ಪಕಲೆಯಲ್ಲಿ ನಿರ್ಮಿಸಿದ್ದಾನೆ.

2) ಅಬ್ಬಕ್ಕದೇವಿಯು ಸಪ್ತಸಮುದ್ರದಾಚೆ ವಿಖ್ಯಾತಳಾದುದು ಹೇಗೆ? ವಿವರಿಸಿರಿ.
- ಪೋರ್ಚುಗೀಸರು ಭಾರೀ ನೌಕೆಯಲ್ಲಿ ಬಲಾಢ್ಯ ಪಡೆಯೊಂದಿಗೆ ಆಕ್ರಮಣಕ್ಕೆ ಸಜ್ಜಾಗಿ ಉಲ್ಲಾಳದ ಕರಾವಳಿಯಲ್ಲಿ ಲಂಗರು ಹಾಕಿದ್ದರು. ಆಗ ರಾಣಿ ಅಬ್ಬಕ್ಕದೇವಿ ಮೊಗೇರು ಎಂಬ ಮೀನುಗಾರ ಸಾಹಸಿ ಸೈನಿಕರು ಕರಾಳ ರಾತ್ರಿಯ ವೇಳೆ ಸದ್ದುಗದ್ದಲವಿಲ್ಲದೆ ನೂರಾರು ಸಣ್ಣ ದೋಣಿಗಳಲ್ಲಿ ಹೋಗಿ ಸಾವಿರಾರು ತೆಂಗಿನಗರಿಯ ಉರಿಯುವ ದೀವಟಿಗೆಗಳನ್ನು ಕ್ಷಣಾರ್ದದಲ್ಲಿ ನೌಕೆಯ ಮೇಲೆಸೆದಿದ್ದರು. ಧಗಧಗ ಉರಿಯುವ ನೌಕೆಯಲ್ಲಿ ದಿಕ್ಕೆಟ್ಟ ಪೋರ್ಚುಗೀಸ ಸೈನಿಕರು ಸಾವಿನಿಂದ ಪಾರಾಗಲು ಸಮುದ್ರಕ್ಕೆ ಹಾರಿದಾಗ ಅಬ್ಬಕ್ಕದೇವಿಯ ಸೈನಿಕರ ಖಡ್ಗ, ಈಟಿಗಳಿಗೆ ಬಲಿಯಾದರು. ಈ ರೀತಿಯಾಗಿ ಪೋರ್ಚುಗೀಸರ ಹಡಗನ್ನು ಮುಳುಗಿಸಿ, ಮೀರಾಂಡಾ ಮತ್ತು ಡಿ. ಮೆಲ್ಲೊ ಎಂಬ ಸೇನಾಪತಿಗಳನ್ನು ಓಡಿಸಿ ಸಪ್ತ ಸಮುದ್ರದಾಚೆ ವಿಖ್ಯಾತಳಾದಳು ವೀರರಾಣಿ ಅಬ್ಬಕ್ಕದೇವಿ.

3) ಕೆಳದಿಯ ಚೆನ್ನಮ್ಮಾ ಯುದ್ದವನ್ನೇ ಮಾಡದೆ ಬಲಾಢ್ಯ ಮೊಗಲರ ಸೈನ್ಯವನ್ನು ಹೇಗೆ ಸೋಲಿಸಿದಳು? ವಿವರಿಸಿರಿ.                         
- ಕೆಳದಿಯ ರಾಣಿಚೆನ್ನಮ್ಮಾ ಮೊಘಲರಿಗೆ ಅಂಜಿ ತಲೆ ಮರೆಸಿಕೊಂಡು ಓಡಿ ಬಂದ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದಳು. ಈ ವಿಷಯ ತಿಳಿದ ಔರಂಗಜೇಬ ತನ್ನ ಮಗ ಅಜಮತಾರನ ಜೊತೆಗೆ ಬಾ ರಿ ಸೈನ್ಯವನ್ನು ಕೆಳದಿಯ ಕಡೆಗೆ ಕಳುಹಿಸಿದನು. ಆದರೆ ಚಾಣಾಕ್ಷಳಾದ ಚೆನ್ನಮ್ಮಾ ತನ್ನ ರಾಜಧಾನಿಯನ್ನು ಭುವನಗಿರಿಗೆ ಸ್ಥಳಾಂತರಿಸಿ ಸುತ್ತಲಿನ ಬೆಟ್ಟ, ಕಣಿವೆ, ಇಕ್ಕಟ್ಟುದಾರಿ, ಕಾಲುದಾರಿ, ಕಳ್ಳದಾರಿಗಳಲ್ಲಿ ತನ್ನ ಸೈನಿಕರನ್ನು ನಿಲ್ಲಿಸಿ ಮೊಘಲ್ ಸೇನೆಗೆ ಅನ್ನ, ನೀರು ಸಿಗದಂತೆ ಮಾಡಿದಳು. ದಟ್ಟವಾದ ಕಾಡುಗಳ ಸಂದುಗೊಂದುಗಳಲ್ಲಿ ಚಲಿಸಲು ಆಗದೆ ಮಲೆನಾಡಿನ ಮಳೆಗೆ ತತ್ತರಿಸಿ ಪ್ರಾಣಭೀತಿಯಿಂದ ಪಲಾಯನಗೊಂಡರು ಮೊಘಲರು. ಈ ರೀತಿಯಾಗಿ ಯುದ್ಧವನ್ನೇ ಮಾಡದೆ ಕೆಳದಿಯ ಚೆನ್ನಮ್ಮಾ ಬಲಾಢ್ಯ ಮೊಘಲ್ ಸೈನ್ಯವನ್ನು ಸೋಲಿಸಿದ್ದಳು.

5) ಕಿತ್ತೂರು ರಾಣಿ ಚೆನ್ನಮ್ಮಾಳ ಸ್ವಾಭಿಮಾನ ಮತ್ತು ದೇಶಾಭಿಮಾನವನ್ನು ಕುರಿತು ಬರೆಯಿರಿ.                                                    
- ಬೆಳಗಾವಿ ಜಿಲ್ಲೆಯ ಕಿತ್ತೂರಿನ ರಾಣಿ ಚೆನ್ನಮ್ಮಾಜೀ ಬಲಾಢ್ಯ ಬ್ರಿಟಿಷರನ್ನು ಸೋಲಿಸಿದ ವೀರರಾಣಿ, ಅವಳು ಸೆರೆಯಾಳುಗಳನ್ನು ಅದರಲ್ಲೂ ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡಕರುಣಾಮಯಿ. ಬ್ರಿಟಿಷರು ಮುಂದೆ ಹಿತಶತ್ರುಗಳೊಂದಿಗೆ ಪಿತೂರಿ ನಡೆಸಿ ಮದ್ದಿನಲ್ಲಿ ಸೆಗಣಿ ಸೇರಿಸಿ ರಾಣಿ ಚೆನ್ನಮ್ಮಾಳ ತೋಪಲ್ಲಿ ಸೆಗಣಿ ಸೇರಿಸಿ ರಾಣಿ ಚೆನ್ನಮ್ಮಾಳ ತೋಪಳನ್ನು ಸೆರೆ ಹಿಡಿದು ಇಟ್ಟಾಗ, ಸ್ವಾತಂತ್ರ್ಯದ ಕನಸನ್ನೇ ಕಂಡಳು ವೀರರಾಣಿ. ಸೆರೆಮನೆಯಲ್ಲಿ ಭೇಟಿಯಾಗಲು ಬಂದ ಸಂಗೊಳ್ಳಿ ರಾಯಣ್ಣ ತಾಯಿ ಎಂದು ಕರೆದಾಗ ತಾಯಿ ಎಂದು ಕರೆದ ಕನ್ನಡದ ಕಂದ ಯಾರು? ಎಂದು ಕೇಳಿದ ಕೆಚ್ಚಿನ ರಾಣಿ ಚೆನ್ನಮ್ಮಾ. ನಿಮ್ಮ ಧಮನಿ ಧಮನಿಗಳಲ್ಲಿ ರಕ್ತದ ಕಣಗಳಿರುವವರೆಗೂ ವೀರರಾಗಿ ಹೋರಾಡಿ.ಎಂದು ಹುರಿದುಂಬಿಸಿದ ಕಿತ್ತೂರು ಚೆನ್ನಮ್ಮಾ. ಬ್ರಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದ್ದು ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತಲೂ 24 ವರ್ಷ ಮೊದಲು !

-:ಭಾಷಾಭ್ಯಾಸ:-

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.    
1) ಪ್ರಾಣಪಕ್ಷಿ: ದಶರಥ ಮಹಾರಾಜರ ಬಾಣ ತಗಲಿ ಶ್ರವಣ ಕುಮಾರನ ಪ್ರಾಣಪಕ್ಷಿ ಹಾರಿ ಹೋಯಿತು.
2) ಸಂಕೋಲೆ: ಸೆರೆಮನೆಗಳಲ್ಲಿ ಮಹಾ ಅಪರಾಧಿಗಳನ್ನು ಸಂಕೋಲೆಗಳಿಂದ ಬಂಧಿಸಿಟ್ಟಿರುತ್ತಾರೆ.
3) ತಲ್ಲಣ: ಭೀಕರ ಅಪಘಾತವನ್ನು ಕಂಡು ಜನರು ತಲ್ಲಣಗೊಂಡರು.
4) ಹೃದಯಂಗಮ: ಬೇಲೂರು ಹಳೇಬೀಡುಗಳಲ್ಲಿಯ ವಾಸ್ತುಶಿಲ್ಪ ಹೃದಯಂಗಮವಾಗಿದೆ.
5) ಪತಾಕೆ: ಶ್ವೇತ ಬಣ್ಣದ ಪತಾಕೆ ಯುದ್ಧವನ್ನು ನಿಲ್ಲಿಸುವುದನ್ನು, ಶಾಂತಿ ಕಾಪಾಡುವುದನ್ನು ಸೂಚಿಸುತ್ತದೆ.                                    
6) ವಿಜಯೋತ್ಸವ:  ಭಾರತೀಯ ಕ್ರಿಕೆಟ್ ತಂಡ 2015ರಲ್ಲಿ ವಿಶ್ವಕಪ್ ಗೆದ್ದಾಗ ಭಾರತದ ತುಂಬೆಲ್ಲಾ ವಿಜಯೋತ್ಸವವನ್ನೇ ಆಚರಿಸಿದಂತಾಗಿತ್ತು.    

ಆ) ಕೆಳಗಿನ ಶಬ್ದಗಳಲ್ಲಿ ಅನುಕರಣಾವ್ಯಯ, ಜೋಡುನುಡಿ ಮತ್ತು ದ್ವಿರುಕ್ತಿಗಳನ್ನು ಗುರುತಿಸಿ, ಪಟ್ಟಿಮಾಡಿ.

ಅನುಕರಣಾವ್ಯಯ           ಜೋಡುನುಡಿ                          ದ್ವಿರುಕ್ತಿ
 ಧಗಧಗ,                             ಮನೆಮಠ,ರೋಗರುಜಿನ           ಕಣಕಣ, ಧಮನಿ ದಮನಿ, ಕಿಡಿಕಿಡಿ
ಝಳಝಳ                                                       

ಇ) ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸರಿಹೊಂದುವ ಸೂಕ್ತ ಹೆಸರು (ಅಂಕಿತನಾಮ)ಗಳಿಂದ ಭರ್ತಿಮಾಡಿರಿ.       

1) ಅಬ್ಬಕ್ಕದೇವಿಯ ಸೈನ್ಯದಲ್ಲಿದ್ದ ಮೀನುಗಾರ ಸಾಹಸಿ ಸೈನಿಕರು ಮೊಗೇರು.
2) ಸನ್ಯಾಸಿಯ ವೇಷ ಧರಿಸಿದ ಮಲ್ಲಮ್ಮಾಜಿಯ ಸರದಾರ ಶಾಂತಯ್ಯ. 
3) ಛತ್ರಪತಿ ಶಿವಾಜಿಯನ್ನು ಸೋಲಿಸಿದ ಬೆಳವಡಿಯ ರಾಣಿ ಮಲ್ಲಮ್ಮಾಜೀ.
4) ಅಬ್ಬಕ್ಕಳ ಸೈನ್ಯಕ್ಕೆ ಹೆದರಿ ಓಡಿಹೋದ ಪೋರ್ಚುಗೀಸ್ ಸೇನಾಪತಿಗಳು ಮಿರಾಂಡಾ ಮತ್ತು ಡಿ. ಮೆಲ್ಲೊ. 
5) ಅಬ್ಬಕ್ಕಳ ಆಸ್ಥಾನಕ್ಕೆ ಭೇಟಿ ನೀಡಿದ ಜಿನೋವಾದ ಪ್ರವಾಸಿ ಪಿತ್ರೋ. 
6) ಉಲ್ಲಾಳವನ್ನು ಆಕ್ರಮಿಸಲು ಸಜ್ಜಾಗಿ ಕರಾವಳಿಯಲ್ಲಿ ಲಂಗರು ಹಾಕಿದ ವಿದೇಶಿಯರು ಪೋರ್ಚುಗೀಸರು.
7) ಕೆಳದಿಯ ಚೆನ್ನಮ್ಮನಲ್ಲಿ ಆಶ್ರಯ ಪಡೆದ ಶಿವಾಜಿಯ ಮಗ ರಾಜಾರಾಮ.
8) ಕೆಳದಿಯ ಮೇಲೆ ದಂಡೆತ್ತಿ ಬಂದ ಔರಂಗಜೇಬನ ಮಗ ಅಜಮತಾರ.
9) ಕಿತ್ತೂರು ರಾಣಿ ಚೆನ್ನಮ್ಮಾಳನ್ನು ಸೆರೆಮನೆಯಲ್ಲಿ ಬೆಟಿಯಾಗಲು ಬಂದ ವೀರ ಸಂಗೊಳ್ಳಿ ರಾಯಣ್ಣ.
10) ಪೋರ್ಚುಗೀಸರನ್ನು ಸೋಲಿಸಿದ ಉಲ್ಲಾಳದ ರಾಣಿ ಅಬ್ಬಕ್ಕದೇವಿ.             

                                                                              

 





 
You Might Like

Post a Comment

0 Comments