Recent Posts

ಶ್ರೇಷ್ಠ ಭಾರತೀಯ ಚಿಂತನೆಗಳು - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು



ಶ್ರೇಷ್ಠ ಭಾರತೀಯ ಚಿಂತನೆಗಳು
 
ಕೃತಿಕಾರರ ಪರಿಚಯ

ಶತಾವಧಾನಿ ಡಾ . ಆರ್ . ಗಣೇಶ್
ಶತಾವಧಾನಿ ಡಾ . ಆರ್ . ಗಣೇಶ್ ಅವರು ಕೋಲಾರದವರು , ಅವರ ತಾಯಿ ತಂದೆಯರು ಅಲಮೇಲಮ್ಮ ಮತ್ತು ಶಂಕರನಾರಾಯಣ ಅಯ್ಯರ್ , ಬಿ.ಇ. , ಎಂ.ಎಸ್ಸಿ . , ಎಂ.ಎ , ಮತ್ತು ಡಿ.ಲಿಟ್ . ಪದವೀಧರರಾದ ಗಣೇಶ್ ಅವರು ನಮ್ಮ ದೇಶದ ಕವಿ ವಿದ್ವಾಂಸರಲ್ಲಿ ಪ್ರಮುಖರು . ಇವರು ಕರ್ನಾಟಕದಲ್ಲಿ ಕಣ್ಮರೆಯಾಗಿದ್ದ ‘ ಅವಧಾನ ‘ ಕಲೆಯನ್ನು ಪುನರುಜ್ಜಿವನ ಮಾಡಿದ್ದಾರೆ . ಇದುವರೆಗೆ ೧೨೦೦ ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು , ಐದು ಶತಾವಧಾನಗಳನ್ನು ನಡೆಸಿದ್ದಾರೆ . ಕನ್ನಡ , ತೆಲುಗು , ಸಂಸ್ಕೃತ , ಪ್ರಾಕೃತ , ಪಾಲಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪರಿಣತಿ ಗಳಿಸಿರುವ ಇವರು ಗ್ರೀಕ್ ಮೊದಲಾದ ಪಾಶ್ಚಾತ್ಯ ಭಾಷೆಗಳ ಪರಿಚಯವನ್ನೂ ಹೊಂದಿದ್ದಾರೆ.
ಸಾಹಿತ್ಯ , ಕಲೆ , ಸಂಸ್ಕೃತಿ ಮೊದಲಾದ ವಿಷಯಗಳನ್ನು ಕುರಿತು ಸಾವಿರಾರು ಘಂಟೆ ಉಪನ್ಯಾಸಗಳನ್ನು ಮಾಡಿದ್ದಾರೆ , ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ . ಅರ್ಷಕಾವ್ಯಗಳ ನುಡಿಬೆಡಗು , ಷಡರ್ಶನಸಂಗ್ರಹ  ಭಾರತೀಲೋಚನ , ಬ್ರಹ್ಮಪುರಿಯ ಭಿಕ್ಷುಕ , ನಿತ್ಯನೀತಿ , ಭಾರತೀಯ ಕ್ಷಾತ್ರಪರಂಪರೆ , ಕಲಾಕೌತುಕ ಮುಂತಾದವು ಇವರ ಕನ್ನಡ ಕೃತಿಗಳು . ‘ ಮಣ್ಣಿನ ಕನಸು ‘ ಇವರು ಬರೆದಿರುವ ವಿಶಿಷ್ಟ ಕಾದಂಬರಿ , “ ಕನ್ನಡದಲ್ಲಿ ಅವಧಾನಕಲೆ ” ಎಂಬ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ತನ್ನ ಪ್ರಪ್ರಥಮ ಡಿ.ಲಿಟ್ . ಪದವಿಯನ್ನು ನೀಡಿತು . ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲೂ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ . ಶಾಸ್ತ್ರೀಯ ನೃತ್ಯ , ಸಂಗೀತ ಮತ್ತು ಯಕ್ಷಗಾನಗಳಿಗೆ ಇವರ ಕೊಡುಗೆ ಮೌಲಿಕವಾಗಿದೆ . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ರಾಷ್ಟ್ರಪತಿಗಳು ನೀಡುವ ಬಾದರಾಯಣ ವ್ಯಾಸ ಸಮ್ಮಾನವೇ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಯಜ್ಞ ಎಂಬ ಶಬ್ದಕ್ಕೆ ಏನೇನು ಅರ್ಥಸ್ವಾರಸ್ಯಗಳಿವೆ ?
ಯಜ್ಞಕ್ಕೆ ‘ ಒಟ್ಟು ಸೇರುವಿಕೆ ‘ , ‘ ಹಂಚಿಕೊಂಡು ಬಾಳುವಿಕೆ ‘ , ‘ ತ್ಯಾಗ ಮಾಡುವಿಕೆ ‘ ಎಂಬೆಲ್ಲ ಅರ್ಥ ಸ್ವಾರಸ್ಯಗಳಿವೆ.

2. ಅನ್ನದ ವಿಷಯದಲ್ಲಿ ವೇದ ಏನು ಹೇಳಿದೆ ?
ಅನ್ನದ ವಿಷಯದಲ್ಲಿ ವೇದವು “ ಮನುಷ್ಯಾ ಅನ್ನಗತಪ್ರಾಣಾ ! ” ಎಂದು ಹೇಳಿದೆ .

3. ಪುರುಷಾರ್ಥ ಎಂದರೆ ಏನೆಂದು ಲೇಖಕರ ಅಭಿಪ್ರಾಯ ?
ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ‘ ಪುರುಷಾರ್ಥ.ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ‘ಪುರುಷಾರ್ಥ ‘ಎಂಬುದು ಲೇಖಕರ ಅಭಿಪ್ರಾಯವಾಗಿದೆ .

4. ಆಚಾರವು ಯಾವುದಕ್ಕೆ ಸಂಬಂಧಿಸಿದೆ ?
‘ ಆಚಾರ’ವು ಮಾನವರ ಒಳಗಣ ಶಿಸ್ತಿಗೆ ಸಂಬಂಧಿಸಿದೆ .

5. ಧರ್ಮ ಎಂದು ನಮ್ಮ ಪರಂಪರೆ ಯಾವುದನ್ನು ಒಕ್ಕಣಿಸಿದೆ ?
ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ .

6. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು ?
ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ‘ ಯಜ್ಞ ‘ ,

7. ಬಾಳು ಹಸನಾಗಬೇಕಾದರೆ ಯಾವುದನ್ನು ಮೀರಬೇಕು ?
ಬಾಳು ಹಸನಾಗಬೇಕಾದರೆ ಜಿಪುಣತನವನ್ನು ಮೀರಬೇಕು

8. ಯಾವುದು ಸ್ವಧರ್ಮ ಎಂದು ಲೇಖಕರು ಹೇಳುತ್ತಾರೆ ?
“ ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ” ಎಂದು ಲೇಖಕರು ಹೇಳಿದ್ದಾರೆ .

9. ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಯಾವುದು ?
ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ‘ ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯ . ”

10 , ಮನಸ್ಸಿನ ನಿಜವಾದ ಉನ್ನತಿಯನ್ನು ತೋರುವ ಅಂಶ ಯಾವುದು ?
ತ್ಯಾಗವನ್ನು ಮಾಡಿಯೂ ಪಶ್ಚಾತ್ತಾಪ ಪಡೆದಿರುವುದು ನಿಜವಾದ ಮನಸ್ಸಿನ ಉನ್ನತಿಯಾಗಿದೆ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಯಜ್ಞಕ್ಕಿರುವ ಎರಡು ಮುಖಗಳು ಯಾವುವು ?
ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ತ್ಯಾಗವು ‘ ದಾನ’ವಾದರೆ ಹಾಗೆ ಮಾಡಲು ಬೇಕಾದ ಮನಸ್ಸಿನ ಪರಿಪಾಕವೇ ತಪಸ್ಸು ‘ , ಹೀಗೆ ಯಜ್ಞ ಎಂಬ ನಾಣ್ಯಕ್ಕೆ ದಾನ ಮತ್ತು ತಪಸ್ಸುಗಳೆಂಬ ಎರಡು ಮುಖಗಳಿವೆ . ಜೀವನದಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ನಾಣ್ಯ ಯಜ್ಞವೇ ಹೊರತು ಬೇರೆ ಬೇರೆ ದೇಶ – ಕಾಲಗಳಲ್ಲಿ , ಬೇರೆ ಬೇರೆ ಪ್ರಭುತ್ವಗಳಲ್ಲಿ ಚಲಾವಣೆಗೆ ಬರುವ ಹಣವಲ್ಲ .

2. ಮನುಷ್ಯನು ತನ್ನ ಒಳಿತನ್ನು ಹೇಗೆ ಸಾಧಿಸಬಹುದು ?
ಮಾನವನು ತನ್ನ ಜೀವನದಲ್ಲಿ ಒಳಿತನ್ನು ಇಬ್ಬಗೆಯಾಗಿ ಸಾಧಿಸಬಹುದೆಂದು ವೇದಗಳು ತಿಳಿಸುತ್ತವೆ . ಅವುಗಳೆಂದರೆ ‘ ಇಷ್ಟ ‘ ಮತ್ತು ‘ ಪೂರ್ತ ‘ ಎಂಬ ಎರಡು ಬಗೆಯ ವಿಧಾನಗಳು , ‘ ಇಪ್ಪ ‘ ಎಂಬುದು ಸಾಮಾನ್ಯವಾದ ಯಜ್ಞವನ್ನು ಸಂಕೇತಿಸುತ್ತದೆ . ಕೆರೆ – ಬಾವಿಗಳನ್ನು ಕಟ್ಟಿಸುವುದು , ಮರ – ಗಿಡಗಳನ್ನು ನೆಡುವುದು , ದೀನ – ದಲಿತರಿಗೆ ಸಹಾಯಮಾಡುವುದು , ಮಂಟಪ – ಧರ್ಮಸತಗಳ ನಿರ್ಮಾಣ ಮಾಡುವುದು , ಕವಿ – ಕಲಾವಿದರ ಪೋಷಣೆ ಮಾಡುವುದು . ಇವೇ ಮುಂತಾದ ಸಾಮಾನ್ಯವಾದ ಲೋಕೋಪಕಾರಗಳನ್ನು ‘ ಪೂರ್ತ ‘ ಎಂಬುದು ಸಂಕೇತಿಸುತ್ತದೆ .

3. ಋತ ಎಂದರೇನು ?
‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ಅನುಭವಕ್ಕೆ ಬರುತ್ತದೆ . ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ . ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ – ತಂತ್ರಜ್ಞಾನಗಳ ಮಾನವ ವ್ಯವಸ್ಥೆ ಹಾಗೂ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ – ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ

4. ಋಣಕ್ಕೂ ಧರ್ಮಕ್ಕೂ ಇರುವ ಸಂಬಂಧವೇನು ?
ಋಣಕ್ಕೂ ಧರ್ಮಕ್ಕೂ ಪರಸ್ಪರ ಸಂಬಂಧವಿದೆ . ಪ್ರಕೃತಿಯ ಯಾವುದೇ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ . ಈ ಅರಿವು ಯಾರನ್ನೇ ಆದರೂ ಇಡೀ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡುತ್ತದೆ . ಈ ಕೃತಜ್ಞತೆಯ ಭಾವವೇ ‘ ಯ’ಪ್ರಜ್ಞೆ , ಒಮ್ಮೆ ನಾವು ನಮ್ಮ ಸುತ್ತಲಿನ ಜತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನೆ ಇರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದೆ ಇರುವುದಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ತಿಳಿಸಿದೆ .

5. ಪುರುಷ ಎಂಬ ಶಬ್ದಕ್ಕಿರುವ ಅರ್ಥವೇನು ?
ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ‘ ಪುರುಷಾರ್ಥ ‘ ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ , ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ . ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ಕಾಣುತ್ತವೆ . ಹೀಗೆ ಸತ್ + ಚಿತ್ ಆನಂದ ಎಂಬ ಇರವು , ಅರಿವು , ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ . ಹೀಗಾಗಿಯೇ ಇಲ್ಲಿ ಕಾಣುವ ‘ ಪುರುಷ ‘ ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ . ಅದೇನಿದ್ದರೂ ಲಿಂಗಾತೀತವಾದ ಆತ್ಮವನ್ನು ಕುರಿತದ್ದು , ಇಂಥ ಆತ್ಮವೇ ಪರಬ್ರಹ್ಮವಸ್ತು .

6. ಸ್ವಧರ್ಮವು ಯಾವುದನ್ನು ಅವಲಂಬಿಸಿದೆ ?
ವ್ಯಕ್ತಿಯು ತನ್ನೊಳಗಿನ ಒಲವು – ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ . ಇಲ್ಲಿ ಕೂಡ ಹುಟ್ಟು ಮತ್ತು ಪರಿಸರಗಳು ತಮ್ಮ ಪ್ರಭಾವವನ್ನು ಸ್ವಲ್ಪಮಟ್ಟಿಗೆ ಬೀರುತ್ತವೆ . ಆದರೆ ಎಂದೂ ಎಲ್ಲಿಯೂ ಇವುಗಳಿಗಿಂತ ಮುಖ್ಯವಾದುದು , ನಾವೆಲ್ಲ ನಂಬಬಹುದಾದ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ನಿಶ್ಚಯವನ್ನು ಸ್ವಧರ್ಮವು ಅವಲಂಬಿಸಿದೆ .

ಇ ) ಈ ಕೆಳಗಿನ ಶಬ್ದಗಳ ಸ್ವಾರಸ್ಯವನ್ನು ಐದಾರು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ .

1. ಋತ :
ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ , ಭಾವಜಗತ್ತಿನ ಅಸ್ತಿತ್ವದ ಹಿಂದಿರುವ ಭಾವವ್ಯವಸ್ಥೆಯು ಕಲಾವಿದರಿಗೆ ಅರಿವಾಗುತ್ತದೆ . ಇವೆರಡೂ ಜಗತ್ತುಗಳ ಹಿಂದಿರುವ ತತ್ತ್ವಜ್ಞಾನಿಗಳಿಗೆ ತಿಳಿಯುತ್ತದೆ . ಹೀಗೆ ‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ಅನುಭವಕ್ಕೆ ಬರುತ್ತದೆ . ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆ ಎಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ . ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ – ತಂತ್ರಜ್ಞಾನಗಳ ಮಾನವವ್ಯವಸ್ಥೆಯಷ್ಟೇ ಅಲ್ಲದೆ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ

2 , ಋಣ :
ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ – ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ ಈ ಅರಿವು ಯಾರನ್ನೇ ಆದರೂ ಇಡಿಯ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡದೆ ಇರದು . ಇಲ್ಲವಾದಲ್ಲಿ ಆ ಅರಿವೇ ಹುಸಿಯೆನ್ನಬೇಕು . ಕೃತಜ್ಞತೆಯ ಈ ಭಾವವೇ ‘ ಋಣ’ಪ್ರಜ್ಞೆ , ಒಮ್ಮೆ ನಾವು ನಮ್ಮ ಸುತ್ತಲಿನ ಜಗತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವೇ ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ .

3. ಸತ್ಯ :
ಜಗತ್ತಿನ ಅಸ್ತಿತ್ವ ಎಲ್ಲರಿಗೂ ತೋರುತ್ತದೆ . ಈ ಅಸ್ತಿತ್ವದ ಹಿಂದಿನ ವ್ಯವಸ್ಥೆ ಕೆಲವರಿಗೆ ಮಾತ್ರ ಕಾಣುತ್ತದೆ . ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ ಭಾವಜಗತ್ತಿನ ಅಸ್ತಿತ್ವದ ಹಿಂದಿರುವ ಭಾವವ್ಯವಸ್ಥೆ ಕಲಾವಿದರಿಗೆ ಅರಿವಾಗುತ್ತದೆ . ಇವೆರಡೂ ಜಗತ್ತುಗಳ ಹಿಂದಿರುವ ತತ್ತ್ವವು ಜ್ಞಾನಿಗಳಿಗೆ ತಿಳಿಯುತ್ತದೆ . ಹೀಗೆ ‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆಯು ಪ್ರಯತ್ನದಿಂದ ಮಾತ್ರ ತಿಳಿಯಲು ಸಾಧ್ಯ ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆ ಎಷ್ಟು ಋಣಿಗಳಾಗಿದ್ದೇವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ .

4. ಧರ್ಮ :
ಒಮ್ಮೆ ನಾವು ನಮ್ಮ ಸುತ್ತಲಿನ ಜಗದ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ . ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ , ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ . ಧರ್ಮದ ಕೇಂದ್ರ ಈಶ್ವರನಲ್ಲಿದೆ . ಈಶ್ವರನಲ್ಲಿ ವಿಶ್ವಾಸವಿರಿಸದ ಜನರೂ ಈ ಜಗತ್ತಿನಲ್ಲಿ ಇದ್ದಾರೆ . ಅಂಥವರ ಪಾಲಿಗೆ ಧರ್ಮ ಎನ್ನುವುದು ಕೇವಲ ಜಗತ್ತು – ಜೀವಗಳ ನಡುವೆ ಇರಬೇಕಾದ ಪ್ರಾಮಾಣಿಕ ವ್ಯವಹಾರವಾಗುತ್ತದೆ . ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ – ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಇಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವಂತಿಲ್ಲ . ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮ , ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ .

5. ಸ್ವಧರ್ಮ :
ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ಹಿಂದೆ ಸಮಾಜ ತುಂಬ ಸರಳವಾಗಿದ್ದಾಗ , ವಿಜ್ಞಾನತಂತ್ರಜ್ಞಾನಗಳ ಮೂಲಕ ದೇಶ – ಕಾಲಗಳ ಬದಲಾವಣೆ ಹೆಚ್ಚಿಲ್ಲದಿದ್ದಾಗ , ಸಂಪನ್ಮೂಲಗಳ ಸಮೃದ್ಧಿ- ವೈವಿಧ್ಯಗಳು ಕಡಿಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು . ಇಂಥ ವ್ಯವಸ್ಥೆ ಪರಿಪೂರ್ಣವೇನೂ ಅಲ್ಲ . ಅದು ಆ ಕಾಲಕ್ಕೆ ಸಾಕೆಂದು ತೋರಿರಬಹುದು . ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ . ಇಂದು ಹುಟ್ಟು ಮತ್ತು ಪರಿಸರಗಳ ಮೂಲಕವೇ ಸ್ವಧರ್ಮವನ್ನು ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವೂ ಇಲ್ಲ , ಅದು ಸಾಧುವೂ ಅಲ್ಲ .

6.ಈಶ್ವರ :
ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ – ಜಗತ್ತುಗಳ ನಡುವೆ ಸಾಮರಸ್ಯವನ್ನು ಉಂಟುಮಾಡುವ ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ , ಧರ್ಮದ ಕೇಂದ್ರ ಈಶ್ವರನಲ್ಲಿದೆ . ಜನಸಾಮಾನ್ಯರು ‘ ದೇವರು ‘ ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ‘ ಈಶ್ವರ ‘ ಎಂದು ಹೆಸರಿಸಿವೆ . ದಿಟವೇ , ಈಶ್ವರನಲ್ಲಿ ವಿಶ್ವಾಸವಿರಿಸದ ಜನರೂ ಈ ಜಗತ್ತಿನಲ್ಲಿ ಇದ್ದಾರೆ . ಅಂಥವರ ಪಾಲಿಗೆ ಧರ್ಮ ಎನ್ನುವುದು ಕೇವಲ ಜಗತ್ತು – ಜೀವಗಳ ನಡುವೆ ಇರಬೇಕಾದ ವ್ಯವಹಾರವಾಗುತ್ತದೆ . ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ – ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಇಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವಂತಿಲ್ಲ . ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮ , ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ .

7. ಪುರುಷಾರ್ಥ :
ಪ್ರಾಮಾಣಿಕ ನಮ್ಮೊಳಗಿನ ಆತ್ಮತತ್ವ ಉಂಟಾಗುವ ರೀತಿಯೇ ‘ ಪುರುಷಾರ್ಥ ‘ ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ ಎಂದಾಗುತ್ತದೆ . ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ . ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ( ಆನಂದದಲ್ಲಿ ಕಾಣುತ್ತವೆ . ಹೀಗೆ ಸತ್ + ಚಿತ್ + ಆನಂದ ಎಂಬ ಇರವು , ಅರಿವು , ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ ಹೀಗಾಗಿಯೇ ಇಲ್ಲಿ ಕಾಣುವ ‘ ಪುರುಷ ‘ ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ . ಇಂಥ ಆತ್ಮವೇ ಪರಬ್ರಹ್ಮವಸ್ತು , ಧರ್ಮ , ಅರ್ಥ , ಕಾಮ , ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪೈಕಿ ಬಯಕೆಯೇ ಮೂಲವಾದ ಕಾಮವು ಜೀವಕೇಂದ್ರಿತವಾಗಿದ್ದರೆ ಇಂಥ ಬಯಕೆಯನ್ನು ಆಯಾ ಹೊತ್ತಿಗೆ ಈಡೇರಿಸಬಲ್ಲ ಸಾಧನಗಳನ್ನು ಪ್ರತಿನಿಧಿಸುವ ಅರ್ಥವು ಜಗತೇಂದ್ರಿತವಾಗಿದೆ .

ಈ ) ಈ ಕೆಳಗಿನ ವಾಕ್ಯಗಳ ಸ್ವಾರಸ್ಯವನ್ನು ಸಂದರ್ಭಸಹಿತ ವಿಸ್ತರಿಸಿ ಬರೆಯಿರಿ .

1. ಚಿನ್ನವಿಲ್ಲದೆ ಬದುಕಬಹುದು , ಅನ್ನವಿಲ್ಲದೆ ಬದುಕಲಾದೀತೆ ? | ” ಮನುಷ್ಯಾಃ ಅನ್ನಗತಪ್ರಾಣಾಃ ”
ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ‘ ಯಜ್ಞ ‘ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುವುದರ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಅಗ್ನಿಯಲ್ಲಿ ಯಾವುದಾದರೂ ಆಹಾರಪದಾರ್ಥವನ್ನು ಹಾಕಿದರೆ ಅದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ . ಹೀಗಿದ್ದರೂ ಅದನ್ನೇ ಮಾಡುವುದೆಂದರೆ – ತನಗೆ ಮರಳಿ ಬರುವುದೆಂಬ ಯಾವುದೇ ನಿಶ್ಚಯ ಇಲ್ಲದಿದ್ದರೂ ಕೊಡಬೇಕೆಂಬ ಜೀವನಪಾಠದ ಕಲಿಕೆಯಾಗಿದೆ . ಮನುಷ್ಯಾ ಅನ್ನಗತಪ್ರಾಣಾ ” ಎಂದು ವೇದ ಹೇಳಿದೆ . ಚಿನ್ನವಿಲ್ಲದೆ ಬದುಕಬಹುದು : ಆದರೆ ಅನ್ನವಿಲ್ಲದೆ ಬದುಕಲಾಗುವುದಿಲ್ಲ . ಹೀಗೆ ನಮಗೆ ಅವಶ್ಯವಾಗಿ ಬೇಕಾದ ಆಹಾರವನ್ನು ನಾವು ಸಾಂಕೇತಿಕವಾಗಿಯಾದರೂ ಅಗ್ನಿಗೆ ಅರ್ಪಿಸುವುದೆಂದರೆ ಅದು ಪ್ರತಿಫಲದ ಅಪೇಕ್ಷೆಯಿಲ್ಲದೆ ತ್ಯಾಗ ಮಾಡುವುದರ ಲಕ್ಷಣ ಎಂದು ಲೇಖಕರು ಈ ಸಂದರ್ಭದಲ್ಲಿ ಹೇಳಿದ್ದಾರೆ .
ಸ್ವಾರಸ್ಯ : ನಮಗೆ ಮರಳಿ ಸಿಗುವುದಿಲ್ಲ ಎಂಬ ಅರಿವಿದ್ದರೂ , ಯಜ್ಞಕ್ಕೆ ತುಪ್ಪ ಇತ್ಯಾದಿಗಳನ್ನು ಹಾಕುವುದರ ಮೂಲಕ ‘ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತ್ಯಾಗಮಾಡುವ ಜೀವನಪಾಠ ಕಲಿಯುತ್ತೇವೆ ‘ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ಯಜ್ಞ
ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಯಜ್ಞ , ದಾನ ಮತ್ತು ತಪಸ್ಸುಗಳ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ‘ ಯಜ್ಞ ‘ , ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುತ್ತಾರೆ . ಅಗ್ನಿಗೆ ಆಹುತಿ ನೀಡುವುದು ಒಂದು ಸಂಕೇತ ಮಾತ್ರ . ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವ ರೀತಿಯಾಗಿದೆ . ಪ್ರಸ್ತುತ ಜಗತ್ತಿನಲ್ಲಿ ಹೊತ್ತುಹೊತ್ತಿನ ತುತ್ತಿಗಾಗಿ , ಅನ್ನ – ಚಿನ್ನಗಳಿಗಾಗಿ , ಹೆಣ್ಣು ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವನು ಸಹಜವಾಗಿ ಜಿಪುಣನಾಗಿದ್ದಾನೆ . ಆದ್ದರಿಂದ ನಮ್ಮ ಸಂಸ್ಕೃತಿಯು ಅವನ ಜಿಪುಣತನವನ್ನು ಹೋಗಲಾಡಿಸಿ ಅವನಲ್ಲಿ ಉದಾರತೆಯನ್ನು ಉಂಟುಮಾಡುತ್ತದೆ ಎಂದು ಲೇಖಕರು ಹೇಳಿದ್ದಾರೆ .
ಸ್ವಾರಸ್ಯ : ಯಜ್ಞದಲ್ಲಿ ಅಗ್ನಿಗೆ ಸಾಂಕೇತಿಕವಾಗಿ ತುಪ್ಪವನ್ನು ಆಹುತಿ ನೀಡಲಾಗುತ್ತದೆ . ಆ ಮೂಲಕ ಮಾನವನಲ್ಲಿರುವ ಲೋಭತನವನ್ನು ಕಡಿಮೆ ಮಾಡುವುದು ಅದರ ಹಿಂದಿರುವ ಮುಖ್ಯ ಉದ್ದೇಶ ಎನ್ನುವುದು ಇಲ್ಲಿನ ಸ್ವಾರಸ್ಯವಾಗಿದೆ .

3. ಧರ್ಮದ ಕೇಂದ್ರ ಈಶ್ವರನಲ್ಲಿದೆ .
ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಪುರುಷಾರ್ಥಗಳಾದ ಧರ್ಮ , ಅರ್ಥ , ಕಾಮ ಮತ್ತು ಮೋಕ್ಷಗಳ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ‘ ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ – ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ , ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ , ಧರ್ಮದ ಕೇಂದ್ರ ಈಶ್ವರನಲ್ಲಿದೆ . ಜನಸಾಮಾನ್ಯರು ‘ ದೇವರು ‘ ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ‘ ಈಶ್ವರ ‘ ಎಂದು ಹೆಸರಿಸಿವೆ . ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ . ‘ ಎಂದು ಧರ್ಮದ ಅಸ್ತಿತ್ವದ ಬಗ್ಗೆ ಹೇಳಿದ್ದಾರೆ .
ಸ್ವಾರಸ್ಯ : ಜೀವ – ಜಗತ್ತುಗಳ ನಡುವೆ ಸಾಮರಸ್ಯ ಉಂಟುಮಾಡುವ ಮೌಲ್ಯವಾದ ಧರ್ಮದ ಕೇಂದ್ರವು ಪ್ರಕೃತಿಯ ಸ್ವರೂಪನಾದ ಈಶ್ವರನಲ್ಲಿ ಇದೆ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

4. ‘ ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯಾವಶ್ಯಕ . ‘ ‘ ವ್ಯಕ್ತಿಯು ತನ್ನೊಳಗಿನ ಒಲವು – ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ ‘
ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ‘ ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ರೀತಿಯೇ ಸ್ವಧರ್ಮ ‘ ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಹಿಂದಿನ ಕಾಲದಲ್ಲಿ ಸಮಾಜ ತುಂಬ ಸರಳವಾಗಿದ್ದಾಗ , ವಿಜ್ಞಾನ ತಂತ್ರಜ್ಞಾನಗಳ ಮೂಲಕ ದೇಶ – ಕಾಲಗಳ ಮಾರ್ಪಾಡು ಹೆಚ್ಚಿಲ್ಲದಿದ್ದಾಗ , ಸಂಪನ್ಮೂಲಗಳ ಸಮೃದ್ಧಿ – ವೈವಿಧ್ಯಗಳು ಕಡಿಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು . ಆದರೆ ಪ್ರಸ್ತುತ ವ್ಯಕ್ತಿಯು ತನ್ನೊಳಗಿನ ಒಲವು ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ ‘ ಎಂದು ಲೇಖಕರು ವಿವರಿಸಿದ್ದಾರೆ.
ಸ್ವಾರಸ್ಯ : ಸಮಾಜದಲ್ಲಿ ವ್ಯಕ್ತಿಯು ಕೇವಲ ತನ್ನ ಬದುಕನ್ನು ಮಾತ್ರ ರೂಪಿಸಿಕೊಳ್ಳವುದು ಮಾತ್ರವಲ್ಲ ತನ್ನ ಸುತ್ತಲಿನ ಜಗತ್ತಿಗೂ ನೆಮ್ಮದಿಯನ್ನು ಉಂಟುಮಾಡಬೇಕೆಂಬ ನೀತಿಯು ಇಲ್ಲಿನ ಸ್ವಾರಸ್ಯವಾಗಿದೆ .
You Might Like

Post a Comment

0 Comments